ಮೈಸೂರು, ಮಾ.22: ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಸೂಚಿಸಿದರು.
ಲೋಕಸಭಾ ಚುನಾವಣೆ ಸಂಬಂಧ ಎಫ್ಎಸ್ ಟಿ, ಎಸ್ಎಸ್ ಟಿ, ವಿಎಸ್ ಟಿ ಸೇರಿದಂತೆ ವಿವಿಧ ತಂಡಗಳಿಗೆ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸಬೇಕು ಅವರು ತಿಳಿಸಿದರು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ಎಫ್‌ಎಸ್‌ಟಿ, ಎಸ್‌ಎಸ್‌ಟಿ ಮತ್ತು ವಿವಿಟಿ ತಂಡದ ಮುಖ್ಯಸ್ಥರಿಗೆ ಮಾದರಿ ನೀತಿ ಸಂಹಿತೆ ಕುರಿತು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಹಲವು ಸಲಹೆ ನೀಡಿದರು.
ಜಿಲ್ಲೆಯಾದ್ಯಂತ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಪ್ರತಿಯೊಂದು ವಾಹನಗಳನ್ನು ಪರಿಶೀಲಿಸಬೇಕು. ಪರಿಶೀಲನೆಯ ಸಂದರ್ಭದಲ್ಲಿ ಯಾವುದೇ ವಾಹನದಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಿಸುವುದು ಕಂಡುಬಂದರೆ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಹಣ ಅಷ್ಟೇ ಅಲ್ಲಾ ಪಕ್ಷದ ಗುರುತಿರುವ ಟಿ-ಶರ್ಟ್, ಕ್ಯಾಪ್, ಹೆಚ್ಚಿನ ಸಂಖ್ಯೆಯ ಸೀರೆ, ಆಹಾರದ ಕಿಟ್ ಮತ್ತಿತರ ಅಕ್ರಮ ವಸ್ತುಗಳ ಸಾಗಾಣಿಕೆ ಕಂಡುಬಂದರೆ ಅವುಗಳನ್ನು ವಶಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚುನಾವಣೆಯ ಸಂದರ್ಭವಾದ್ದರಿಂದ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳು ಕಂಡು ಬಂದ ಸಂದರ್ಭದಲ್ಲಿ ಅಧಿಕಾರಿಗಳು ಜಾಗರುಕರಾಗಿರಬೇಕು ಹಾಗೂ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಸರಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ರಾಜೇಂದ್ರ ಆದೇಶಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ. ಎಂ ಗಾಯತ್ರಿ ಮಾತನಾಡಿ, ಅಧಿಕಾರಿಗಳು ಚುನಾವಣಾ ಕಾರ್ಯವನ್ನು ಯಾವುದೇ ಲೋಪವಾಗದಂತೆ ಅತ್ಯಂತ ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು. ಬೇಸಿಗೆ ಕಾಲವಾದ್ದರಿಂದ ಬಿಸಿಲು ಹೆಚ್ಚಾಗಿರುತ್ತದೆ ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಆರೋಗ್ಯದ ಕಡೆಯು ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಾಗಾರದಲ್ಲಿ ವಾಣಿಜ್ಯ ಇಲಾಖೆಯ ಜಂಟಿ ಆಯುಕ್ತ ಕಂಬಣ್ಣ. ಡಿ, ಎಕ್ಸೈಸ್ ಇಲಾಖೆಯ ಉಪ ಅಧಿಕ್ಷಕ ಮೋಹನ್, ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ಕಾಂತರಾಜು ಮತ್ತಿತರ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.