ಬೆಳಗಾವಿ:ಡಿಸಿಎಂ ಡಿಕೆ ಶಿವಕುಮಾರ್ ಕಾಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೆ ಮುಂದಾದರೆ ಅದನ್ನು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಡಿಕೆ ಶಿವಕುಮಾರ್ ಅವರನ್ನು ನನ್ನ ಜೀವನದಲ್ಲಿಯೇ ಒಪ್ಪುವುದಿಲ್ಲ,ಯಾವ ಕಾರಣಕ್ಕೂ ಅವರು ಬಿಜೆಪಿಗೆ ಬರುವುದನ್ನು ನಾನು ಒಪ್ಪಲ್ಲ.ಅವರು ಬೆಂಬಲಿಗರೊಂದಿಗೆ ಬಿಜೆಪಿಗೆ ಬರುತ್ತಾರೆ ಎನ್ನುವ ಮಾಹಿತಿ ನನ್ನ ಬಳಿ ಇಲ್ಲ, ಅಂತಹ ವಿದ್ಯಮಾನ ಕಾಣುತ್ತಿಲ್ಲ ಹಾಗೊಂದು ವೇಳೆ ಅವರು ಬಿಜೆಪಿ ಬರಲು ಮುಂದಾದರೆ ಅದನ್ನು ಒಪ್ಪಲ್ಲ ಎಂದರು.
ಇನ್ನು ಡಿಕೆ ಶಿವಕುಮಾರ್ ಬಳಿ ಸಂಖ್ಯೆ ಬಹಳ ಕಡಿಮೆ ಇದೆ, ಅವರ ಬಳಿ ಐವತ್ತು ಶಾಸಕರ ಬೆಂಬಲ ಇದೆ ಎನ್ನುವುದು ಮಾಧ್ಯಮಗಳಲ್ಲಿ ಬರುತ್ತಿದೆ ಅಷ್ಟೇ ಐವತ್ತು ಸಂಖ್ಯೆ ಇದ್ದಿದ್ದರೆ ಇಂದೇ ಅವರು ಮುಖ್ಯಮಂತ್ರಿ ಆಗುತ್ತಿದ್ದರು. ಅಲ್ಲಿ ಸಿದ್ದರಾಮಯ್ಯ ಅವರ ಪರವೇ ಹೆಚ್ಚಿನ ಶಾಸಕರಿದ್ದಾರೆಂದರು.
ಈ ಸರ್ಕಾರ ಬೀಳಬಾರದು, ಇನ್ನೂ ಎರಡು ವರ್ಷ ನಡೆಯಬೇಕು.ಜನವಿರೋಧಿ ಆಡಳಿತದಿಂದ ಜನರಿಂದ ಛೀ..ಥೂ.. ಎನಿಸಿಕೊಳ್ಳಬೇಕು ಪದೇ ಪದೇ ಚುನಾವಣೆ ನಡೆದರೆ ಜನರಿಗೆ ಹೊರೆಯಾಗಲಿದೆ ಹಾಗಾಗಿ ಅವಧಿ ಮುಗಿಸಲಿ ಎಂದರು.
ಇಂದಿನ ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲಿ ಬಿಜೆಪಿ ತಟಸ್ಥ ಉಳಿಯಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ, ತಟಸ್ಥವಾಗಿಯೇ ಉಳಿಯಬೇಕು ಎಂದು ಹೈಕಮಾಂಡ್ ಗೆ ಮನವಿ ಮಾಡುತ್ತೇನೆ. ನಾವು ಸಮಯಕ್ಕಾಗಿ ಕಾಯಬೇಕು, ಕಾಂಗ್ರೆಸ್ ನವರು ಏನು ಬೇಕಾದರೂ ಮಾಡಲಿ,ಹೇಗಾದರೂ ಕಚ್ಚಾಡಿಕೊಳ್ಳಲಿ, ಹೊಲಸನ್ನ ನಾವು ಮೈಮೇಲೆ ಎಳೆದುಕೊಳ್ಳಬಾರದು ನಾವು ಚುನಾವಣೆಗೆ ಹೋಗುವುದೇ ಒಳ್ಳೆಯದು ಎಂದರು.
ಈ ಹಿಂದಿನ ಜೆಡಿಎಸ್ ಕಾಂಗ್ರೆಸ್ ಸರ್ಕಾರದ ಮೈತ್ರಿ ಮುರಿದು ಬಿಡಲು ಮೂಲ ಕಾರಣ ಡಿಕೆ ಶಿವಕುಮಾರ್. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಆ ಸಂದರ್ಭದಲ್ಲಿ ನಾನು ನನ್ನ ಮಿತ್ರ ಮಂಡಳಿ ಅಲ್ಲಿಯೇ ಇತ್ತು ದೇವೇಗೌಡರು ಯಾವ ಅರ್ಥದಲ್ಲಿ ಸಿದ್ದರಾಮಯ್ಯ ವಿರುದ್ಧ ಹೇಳಿದ್ದಾರೋ ಗೊತ್ತಿಲ್ಲ ಪ್ರತಿ ಹಂತದಲ್ಲಿಯೂ ನಾನು ಇದ್ದೆ.ಇದಕ್ಕೂ ಸಿದ್ದರಾಮಯ್ಯಗೂ ಸಂಬಂಧವಿಲ್ಲ ಎಲ್ಲದಕ್ಕೂ ಡಿಕೆ ಶಿವಕುಮಾರ್ ಅವರ ಬೆಳಗಾವಿ ರಾಜಕೀಯ ಹಸ್ತಕ್ಷೇಪವೇ ಕಾರಣ ಎಂದರು.

