ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗದೇ ಇರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಇತ್ತೀಚೆಗಷ್ಟೇ ದೆಹಲಿಗೆ ಭೇಟಿ ನೀಡಿದ್ದಾಗ ಭೇಟಿಯಾಗಿ ಮಾತುಕತೆ ನಡೆಸಿದ್ದೆ ಪದೇ ಪದೇ ಅವರಿಗೆ ತೊಂದರೆ ಕೊಡಬಾರದು ಎಂದು ಖರ್ಗೆ ಅವರ ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿಯಾಗಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆಯಷ್ಟೇ ದೆಹಲಿಗೆ ಹೋಗಿದ್ದಾಗ ಖರ್ಗೆ ಅವರನ್ನು ಭೇಟಿಯಾಗಿ ಬಂದಿದ್ದೇನೆ,ನೀವೇ ಮಾಧ್ಯಮಗಳಲ್ಲಿ ಖರ್ಗೆ ನಿವಾಸಕ್ಕೆ ಡಿಕೆ ಬಂದರು ,ಡಿಕೆ ಹೋದರು,ಕಾಫಿ ಕುಡಿದರು,ತಿಂಡಿ ತಿಂದರು, ಇಷ್ಟು ಸಮಯ ಚರ್ಚಿಸಿದರು ಎಂದೆಲ್ಲಾ ವರದಿ ಮಾಡಿದ್ದೀರಿ, ನಿಮ್ಮದೇ ಟೆನ್ಷನ್ ಎಲ್ಲರಿಗೂ,ನಮಗೆ ಯಾವುದೇ ಟೆನ್ಷನ್ ಇಲ್ಲ ನೀವೇ ಎಲ್ಲರಿಗೂ ಟೆನ್ಷನ್ ಮಾಡುತ್ತೀರಿ, ಸಂದರ್ಭ ಇದ್ದಾಗ ಹೋಗಿ ಅವರನ್ನು ಭೇಟಿ ಮಾಡಿಯೇ ಮಾಡುತ್ತೇನೆ,ಪದೇ ಪದೇ ತೊಂದರೆ ಕೊಡುವುದು ಬೇಡ ಎಂದು ಬೆಂಗಳೂರಿನ ಅವರ ನಿವಾಸಕ್ಕೆ ಹೋಗಿಲ್ಲ ಎಂದರು.
ಸಚಿವರಾಗಲು ಎಲ್ಲರಿಗೂ ಆಸೆ ಇರಲಿದೆ ಹಾಗಾಗಿ ದೆಹಲಿಗೆ ಹೋದರೆ ತಪ್ಪೇನು? ದೆಹಲಿಗೆ ಹೋಗುವುದ ಬೇಡ ಎನ್ನಲಾಗುತ್ತದಾ? ಅವರ ಭವಿಷ್ಯ ನಿರ್ಮಾಣ ಮಾಡಲು ಹೋಗುವುದರಲ್ಲಿ ತಪ್ಪೇನು, ಪಕ್ಷದ ವಿರುದ್ಧ ಹೇಳಿಕೆ ನೀಡಿದರೆ, ಗುಂಪುಗಾರಿಕೆ ಮಾಡಿದರೆ, ಪಕ್ಷದ ವಿರುದ್ಧ ಹೋದರೆ ಮಾತ್ರ ಕ್ರಮದ ಎಚ್ಚರಿಕೆ ನೀಡುತ್ತೇವೆ, ಪಾಪ ಅವರೆಲ್ಲಾ ಒಂದು ಅವಕಾಶಕ್ಕಾಗಿ ಹೋಗುತ್ತಾರೆ ಅಷ್ಟೆ ಅದಕ್ಕೆಲ್ಲಾ ನಾನು ಅಡ್ಡಿಪಡಿಸಲ್ಲ ಎಂದರು.
ಅಧಿಕಾರ ಹಂಚಿಕೆ ವಿಚಾರ ಕುರಿತು ಹೈಕಮಾಂಡ್ ನಿರ್ಧರಿಸಲಿದೆ ಎನ್ನುವ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಬಿಜೆಪಿ ಮತ್ತು ಜೆಡಿಎಸ್ ಟೀಕಿಸಿವೆ, ಆದರೆ ಹೈಕಮಾಂಡ್ ಅಂದರೆ ಒಬ್ಬ ವ್ಯಕ್ತಿಯಲ್ಲ ಅದು ಒಂದು ಸಮಿತಿ. ಅಲ್ಲಿ ಖರ್ಗೆಯವರೂ ಸೇರಿದಂತೆ ಹತ್ತಾರು ಹಿರಿಯ ನಾಯಕರೆಲ್ಲಾ ಇರಲಿದ್ದಾರೆ. ಇಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಎಂದು ನಾನೇ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಯಾ,ನಿಗಮ ಮಂಡಳಿ ನೇಮಕದ ವೇಳೆ ಮುಖ್ಯಮಂತ್ರಿಗಳು,ಸಚಿವರು,ಶಾಸಕರ ಅಭಿಪ್ರಾಯ ಕೇಳಿ ಅವರ ಅಭಿಪ್ರಾಯ ಈ ರೀತಿ ಇದೆ ನನ್ನ ಅಭಿಪ್ರಾಯ ಇದು ಎಂದು ಹೈಕಮಾಂಡ್ ಗೆ ತಿಳಿಸಿದ್ದೆ ಅದೇ ರೀತಿ ಈ ವಿಚಾರದಲ್ಲಿ ಖರ್ಗೆ ಅವರು ಒಬ್ಬರೇ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ, ಅದನ್ನೇ ಅವರು ಹೇಳಿದ್ದಾರಷ್ಟೆ ಎಂದರು.
ನಾಎಲ್ಲರೂ ಹೈಕಮಾಂಡ್ ಆದೇಶವನ್ನು ಗೌರವಿಸಲಿದ್ದೇನೆ, ನಮ್ಮಲ್ಲಿ ಗೊಂದಲವಿದೆ ಎಂದು ಮಾಧ್ಯಮಗಳು ಸೃಷ್ಠಿಸುತ್ತಿವೆ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಪಕ್ಷದ ಸೂಚನೆಯಂತೆ ನಾವು ಮುನ್ನಡೆಯುತ್ತೇವೆ. ಆಂತರಿಕ ವಿಚಾರಗಳ ಕುರಿತು ನಾವು ಪಕ್ಷದ ನಾಲ್ಕು ಗೋಡೆಯ ನಡುವೆ ಚರ್ಚಿಸಿ ನಿರ್ಧಾರ ಮಾಡಲಿದ್ದೇವೆ ಎಂದರು.
ನನ್ನ ವಿರುದ್ಧ ಶಾಸಕರ ಖರೀದಿ ಆರೋಪವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಆದರೆ ರಾಜ್ಯದಲ್ಲಿ ಬಿಜೆಪಿಯೇ ಕುದುರೆ ವ್ಯಾಪಾರದ ಪಿತಾಮಹ,ಹಿಂದಿನದನ್ನು ಅವರು ನೆನಪಿಸಿಕೊಳ್ಳಲಿ ಪಾಪ ಜನತಾದಳದವರು ಮೈತ್ರಿ ಮಾಡಿಕೊಂಡು ಇಕ್ಕಟ್ಟಿನಲ್ಲಿ ಸಿಕ್ಕಾಕಿಕೊಂಡಿದ್ದಾರೆ ಎಂದರು.

