ಬೆಂಗಳೂರು, ಮೇ.7: ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಪೆನ್ ಡ್ರೈವ್ ಬಿಡುಗಡೆಯ ಹಿಂದೆ ಡಿಸಿಎಂ ಡಿ.ಕೆ ಶಿವಕುಮಾರ್ ಕೈವಾಡ ಇಲ್ಲ ಎಂದು ಮಾಜಿ ಸಚಿವ ಎಲ್.ಆರ್. ಶಿವರಾಮೇಗೌಡ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ನಾಯಕರ ಒತ್ತಡದಿಂದಲೇ ವಿಡಿಯೋಗಳನ್ನು ನಾನೇ ಬಹಿರಂಗಪಡಿಸಿದೆ ಎಂದು ವಕೀಲ ದೇವರಾಜೇಗೌಡ ನನ್ನ ಬಳಿ ಹೇಳಿದ್ದರು ಎಂದು ಸ್ಪಷ್ಟಪಡಿಸಿದರು.
ಡಿ. ಕೆ ಶಿವಕುಮಾರ್ ವಿರುದ್ಧ ಮತ್ತು ನನ್ನ ವಿರುದ್ಧ ಆತ ಹೇಳಿರುವ ಆರೋಪಗಳು ಸುಳ್ಳು ಎಂದು ಪುನರುಚ್ಚರಿಸಿದರು.
ನಾಲ್ಕು ದಿನಗಳ ಹಿಂದೆ ನಾನು ಅವರ ಜೊತೆ ಮಾತನಾಡಿದ್ದೆ ಆದರೆ ಅದಕ್ಕು ಮೊದಲು ನನಗೆ ಅಷ್ಟಾಗಿ ದೇವರಾಜ ಗೌಡರ ಪರಿಚಯ ಇರಲಿಲ್ಲ, ಹೊಳೆನರಸೀಪುರದವರ ಕಡೆಯಿಂದ ದೇವರಾಜೇಗೌಡ ನನ್ನನ್ನು ಭೇಟಿ ಮಾಡಿದ್ದರು.
ಹಾಗೆ ಭೇಟಿಯಾದ ವೇಳೆ ಬಿಜೆಪಿಯ ಎಲ್ಲ ಮುಖಂಡರು ವಿಡಿಯೋ ಬಹಿರಂಗಪಡಿಸುವಂತೆ ನಿನಗೆ ಬಲವಂತ ಮಾಡಿದ್ದರು ಹಾಗಾಗಿ ನಾನೇ ಅದನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದರು ಎಂದು ಶಿವರಾಮೇಗೌಡ ಸ್ಪಷ್ಟ ನುಡಿಯಲ್ಲಿ ತಿಳಿಸಿದರು.
ಹೀಗೆ ವಿಡಿಯೋ ಬಿಡುಗಡೆ ಮಾಡುವ ಸಂಬಂಧ ಹೆಚ್ ಡಿ ಕುಮಾರಸ್ವಾಮಿ ಅವರ ಒಪ್ಪಿಗೆ ಇತ್ತು ಎಂದು ಕೂಡ ದೇವರಾಜೇಗೌಡ ನನ್ನಲ್ಲಿ ಹೇಳಿದ್ದರು ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಒಂದು ಸಾರಿ ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದರು ಆದರೆ ಡಿಕೆಶಿ ಬೇರೆ ಕಡೆ ಪ್ರವಾಸದಲ್ಲಿದ್ದ ಕಾರಣ ಭೇಟಿಯಾಗಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.
ಅದೇನಾಯ್ತೋ ಏನೋ ದೇವರಾಜೆಗೌಡ ನೆನ್ನೆ ದಿಢೀರನೆ ಮಾಧ್ಯಮಗೋಷ್ಠಿ ಕರೆದು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ಶಿವರಾಮೇಗೌಡ ಹೇಳಿದರು.