ಮೈಸೂರು.ಮೇ. 31: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಡಾ ಜೆ.ಸಿ. ಪ್ರಕಾಶ್ ಸೂಚಿಸಿದರು.
ಇಂದು ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಸಿಬ್ಬಂದಿಗೆ ಮತ ಎಣಿಕೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು .
ಮೈಸೂರು ,ಚಾಮರಾಜನಗರ, ಹಾಸನ ಮತ್ತು ಮಂಡ್ಯದ ಒಟ್ಟು 14 ಕೌಂಟಿಂಗ್ ಟೇಬಲ್ ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹ ಪಾಲ್ಗೊಂಡು ಎಣಿಕೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಇದು ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆ ಆಗಿದ್ದು, ಅದರ ವ್ಯಾಲಿಡ್ ಮತ್ತು ಇನ್ ವ್ಯಾಲಿಡ್ ಮತಪತ್ರದ ಬಗ್ಗೆ ಮಾಹಿತಿ ನೀಡಿದರು.
ಬ್ಯಾಲೆಟ್ ಪೇಪರ್ ಗಳನ್ನು ಯಾವ ರೀತಿ ತೆರೆಯಬೇಕು ,ಯಾವುದು ವ್ಯಾಲಿಡ್, ಯಾವುದು ವ್ಯಾಲಿಡ್ ಅಲ್ಲ ಎಂಬುದನ್ನು ಹೇಗೆ ಗುರುತಿಸಬೇಕು. ಸಂಖ್ಯೆಗಳನ್ನು ಯಾವ ರೀತಿ ಕೊಡಬೇಕು. ಯಾವುದನ್ನು ರಿಜೆಕ್ಷನ್ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಏನೇ ಗೊಂದಲದ ಪರಿಸ್ಥಿತಿ ಬಂದಲ್ಲಿ ಆರ್ .ಓ ಗಮನಕ್ಕೆ ತರಬೇಕು ಎಂದು ಮತ ಎಣಿಕೆ ತರಬೇತುದಾರರಿಗೆ ಸಲಹೆ ನೀಡಿದರು.
ಮತ ಎಣಿಕೆ ಸಿಬ್ಬಂದಿಗಳು ಮತ ಎಣಿಕೆಯ ದಿನ ಬೆಳಿಗ್ಗೆ 7 ಗಂಟೆಗೆ ಹಾಜರಿರಬೇಕು. ಇದು ಬಹಳ ಸುಲಭದ ಕೆಲಸವಾಗಿದ್ದು, ಮತ ಪತ್ರ ಎಣಿಕೆ ಮಾಡಿ 25 ಬ್ಯಾಲೆಟ್ ಪೇಪರ್ ಗಳ ಒಂದು ಬಂಡೆಲ್ ಮಾಡಿ , ಅದಲ್ಲಿ ಮೊದಲ ಆದ್ಯತೆಯ ಬ್ಯಾಲೆಟ್ ಪೇಪರ್ ಗಳನ್ನು ಬೇರ್ಪಡಿಸಿ ಕೊಡಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಕಚೇರಿಯ ಸಹಾಯಕ ಚುನಾವಣಾಧಿಕಾರಿಗಳಾದ ಕವಿತಾ ರಾಜಾರಾಂ ಅವರು ಮಾತನಾಡಿ, ಚುನಾವಣೆಯ ದಿನ ಬೆಳಗ್ಗೆ 8 ಗಂಟೆಗೆ ವೋಟಿಂಗ್ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಕಡ್ಡಾಯವಾಗಿ ನಿಮ್ಮ ಐಡಿ ಕಾರ್ಡ್ಗಳನ್ನು ಧರಿಸಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.