Fri. Mar 6th, 2026

ಸಾಕ್ಷ್ಯಚಿತ್ರ ಪ್ರೇಕ್ಷಕರು ಫೀಲ್ ಮಾಡುವಂತೆ ಇರಬೇಕು: ಮಾಯ ಚಂದ್ರ

Share this with Friends

ಬೆಂಗಳೂರು:ಸಾಕ್ಷ್ಯಚಿತ್ರಕ್ಕೆ ಅದರದ್ದೇ ಆದ ವೇಗ ಇರುತ್ತದೆ. ನೆಟ್ ಫ್ಲಿಕ್ಸ್, ಅಮೆಜಾನ್ ಕಾಲದಲ್ಲಿ ವೇಗ, ಸದ್ದು ಮುನ್ನೆಲೆಯಲ್ಲಿದೆ. ಆದರೆ ಸಾಕ್ಷ್ಯಚಿತ್ರ ಆ ರೀತಿ ಇರಬಾರದು. ಸಹಾನುಭೂತಿಯಿಂದ ಸಾಕ್ಷ್ಯಚಿತ್ರ ಮಾಡಬೇಕು. ಪ್ರೇಕ್ಷಕರು ಫೀಲ್ ಮಾಡುವಂತೆ ಇರಬೇಕು ಎಂದು ಸಾಕ್ಷ್ಯಚಿತ್ರ ನಿರ್ದೇಶಕಿ ಮಾಯ ಚಂದ್ರ ಹೇಳಿದರು.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ನಾಲ್ಕನೇ ದಿನ ನಡೆದ ಸಾಕ್ಷ್ಯಚಿತ್ರ ನಿರ್ಮಾಣದ 12 ನಿಯಮಗಳು ಎಂಬ ಗೋಷ್ಠಿಯಲ್ಲಿ  ಸಾಕ್ಷ್ಯಚಿತ್ರ ನಿರ್ದೇಶನ, ಚಿತ್ರೀಕರಣ ಸಿದ್ಧತೆ, ಸಾಕ್ಷ್ಯಚಿತ್ರ ರೂಪಿಸುವಿಕೆ, ಸಾಕ್ಷ್ಯಚಿತ್ರ ಬೀರುವ ಪರಿಣಾಮಗಳ ಕುರಿತು ಮಾತನಾಡಿದ ಅವರು, ಒಂದು ಉತ್ತಮ ಸಾಕ್ಷ್ಯಚಿತ್ರ ಸಂವಹನ ಆರಂಭಿಸಬೇಕು. ಸಾಕ್ಷ್ಯಚಿತ್ರ ಕೊನೆಗೊಂಡ ತಕ್ಷಣ ಸಂವಾದ ಆರಂಭವಾಗುವಂತೆ ಮಾಡಬೇಕು. ಸಾಕ್ಷ್ಯಚಿತ್ರವನ್ನು ಅರ್ಥಪೂರ್ಣವಾಗಿ, ಕಥನಪೂರ್ಣವಾಗಿ ಮಾಡಿದಾಗ ಅದು ಜನರಿಗೆ ತಲುಪುತ್ತದೆ ಎಂದರು.

ಉದ್ದೇಶ ಸರಿಯಾಗಿದ್ದರೆ ಯಾರು ಬೇಕಾದರೂ ಸಾಕ್ಷ್ಯಚಿತ್ರ ಮಾಡಬಹುದು, ʼಸಾಕ್ಷ್ಯಚಿತ್ರ ಆರಂಭಿಸುವ ಮೊದಲು ಯಾಕೆ ಈ ಸಾಕ್ಷ್ಯಚಿತ್ರ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರ ತಿಳಿದಿರಬೇಕು. ಉದ್ದೇಶ ಸ್ಪಷ್ಟವಾಗಿರಬೇಕು. ಸಾಕ್ಷ್ಯಚಿತ್ರಕ್ಕೆ ಅದರದ್ದೇ ಆದ ವೇಗ ಇರುತ್ತದೆ. ಪ್ರೇಕ್ಷಕರು ಫೀಲ್ ಮಾಡುವಂತೆ ಇರಬೇಕು’ ಎಂದು ಹೇಳಿದರು.

ಈ ವೇಳೆ ಕೆಲವು ಸಮಯದ ಹಿಂದೆ ಬೆಂಗಳೂರಿನಲ್ಲಿ ಅಪಘಾತದಲ್ಲಿ ತೀರಿಕೊಂಡ ಹರೀಶ್ ಅವರ ಉದಾಹರಣೆ ನೀಡಿದ ಅವರು, ‘ಹರೀಶ್ ಅವರು ಬೆಂಗಳೂರಿನಲ್ಲಿ ಅಪಘಾತಕ್ಕೊಳಗಾಗಿ ತೀರಿಕೊಂಡರು. ಅವರ ದೇಹ ಎರಡುಭಾಗವಾಗಿತ್ತು. ಆದರೆ, ಅವರು ಅಂಥಾ ಸಂದರ್ಭದಲ್ಲಿಯೂ ತಮ್ಮ ಕಣ್ಣುಗಳನ್ನು ದಾನ ಮಾಡಿದರು. ಈ ಘಟನೆ ನನ್ನನ್ನು ಕಲಕಿತು. ನಾನು ಅವರ ಊರಿಗೆ ಹೋಗಿ ಸಾಕ್ಷ್ಯಚಿತ್ರ ಮಾಡಿದೆ. ಹರೀಶ್ ಅಂಥಾ ಸ್ಥಿತಿಯಲ್ಲೇ ಕಣ್ಣು ದಾನ ಮಾಡುತ್ತಾರೆ ಎಂದಾದರೆ ಉತ್ತಮ ಸ್ಥಿತಿಯಲ್ಲಿ ಇರುವವರು ಯಾಕೆ ಕಣ್ಣು ದಾನ ಮಾಡಬಾರದು ಎಂಬ ಪ್ರಶ್ನೆಯನ್ನು ಸಾಕ್ಷ್ಯಚಿತ್ರ ಮೂಲಕ ಇಟ್ಟೆ. ಹರೀಶ್ ತೀರಿಕೊಂಡ 11ನೇ ದಿನ ತುಮಕೂರಿನ ಬಳಿ ಕರೆಗೊಂಡನಹಳ್ಳಿ ಎಂಬ ಅವರ ಊರಿನ 300 ಮಂದಿ ಎರಡೇ ಗಂಟೆಗಳಲ್ಲಿ ಅವರ ಕಣ್ಣು ದಾನ ಮಾಡಿದರು. ಇದು ದಾಖಲೆಯಾಗಿ ಉಳಿದಿದೆ. ಆ ದಿನ ನನ್ನ ಕೆಲಸದ ನನಗೆ ಸಾರ್ಥಕ ಭಾವ ಉಂಟಾಯಿತು’ ಎಂದರು.

ಸಾಕ್ಷ್ಯಚಿತ್ರ ಆಸಕ್ತರು ಈ ಗೋಷ್ಠಿಯಲ್ಲಿ ಪಾಲ್ಗೊಂಡರು. ಮಾಯ ಚಂದ್ರ ಅವರು ತಮ್ಮ ಸಾಕ್ಷ್ಯಚಿತ್ರ ತುಣುಕುಗಳನ್ನು ಪ್ರದರ್ಶಿಸಿ ಸಾಕ್ಷ್ಯಚಿತ್ರ ಕುರಿತು ವಿವರವಾದ ಚಿತ್ರಣ ನೀಡಿದರು.


Share this with Friends

Related Post