ಮಂಗಳೂರು:ಅಂಗಾಂಗ ದಾನದಲ್ಲಿ ಕರ್ನಾಟಕ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ನಮ್ಮ ಸಾವಿನ ನಂತರವೂ ಜೀವಿಸುವ, ಮತ್ತೊಬ್ಬರ ಬದುಕಿಗೆ ಬೆಳಕಾಗಲು ಅಂಗಾಂಗ ದಾನ ಮಾಡಲು ಆನ್ಲೈನ್ ಮೂಲಕ ನೋಂದಣಿ ಮಾಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದರು.
ಬೆಂಗಳೂರಿನ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಮತ್ತು ದ.ಕ ಜಿಲ್ಲಾ RGUHS ಕಾಲೇಜಿನ ಮ್ಯಾನೆಜ್ಮೆಂಟ್ ಅಸೋಸಿಯೇಷನ್ ಅವರ ಸಹಯೋಗದೊಂದಿಗೆ, ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ‘WALKATHON- 2025ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದುಶ್ಚಟಗಳ ದಾಸ್ಯದಿಂದ ಮುಕ್ತರಾಗುವುದು ನಮ್ಮ ಹಕ್ಕು’ ಎಂಬ ಘೋಷವಾಕ್ಯದಡಿ ಇಂದು ನಗರದಾದ್ಯಂತ ಕಾಲ್ನಡಿಗೆ ಜಾಥಾ ನಡೆಸಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಹಾಗೂ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ, ಪ್ರಚಾರ ಮಾಡುವ ಕಾರ್ಯಕ್ರವನ್ನು ಯಶಸ್ವಿಗೊಳಿಸಿದೆವು ಎಂದರು.
ಅಂಗಾಂಗ ದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ನೆರವಾಗಲು ದ.ಕ ಜಿಲ್ಲಾ ನಾಗರಿಕರು ಕೈಜೋಡಿಸಬೇಕು, ಅಂಗಾಂಗ ದಾನದಲ್ಲಿ ನಮ್ಮ ಕರ್ನಾಟಕ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ನಮ್ಮ ಸಾವಿನ ನಂತರವೂ ಜೀವಿಸುವ, ಮತ್ತೊಬ್ಬರ ಬದುಕಿಗೆ ಬೆಳಕಾಗುವ ಅವಕಾಶವನ್ನು ಬಳಸಿಕೊಳ್ಳೋಣ. ಅಂಗಾಂಗ ದಾನ ಮಾಡಲು ಇಚ್ಚಿಸುವವರು ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಬಹುದು ಎಂದರು.
ಡ್ರಗ್ಸ್ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಬೇಕು, ಡ್ರಗ್ಸ್ ಜಾಲದ ಬಗ್ಗೆ ಅನುಮಾನ ಬಂದರೆ ತಕ್ಷಣ ಸಂಬಂದಪಟ್ಟವರಿಗೆ ದೂರು ನೀಡಬೇಕು, ನಾವುಗಳು ವಿದ್ಯಾರ್ಥಿ- ಯುವಜನರೊಂದಿಗೆ, ಮನೆಯ ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸೋಣ, ಸ್ಪಂದಿಸೋಣ. ಮನೆಯ ಮತ್ತು ಸಮಾಜದ ಮಕ್ಕಳನ್ನು ಡ್ರಗ್ಸ್ನಂತಹ ದುಶ್ಚಟಗಳಿಂದ ರಕ್ಷಿಸೋಣ. ಆ ಮೂಲಕ ದುಶ್ಚಟಗಳ ಮುಕ್ತ ಸಮಾಜ ನಿರ್ಮಾಣ ಮಾಡಬಹುದು. ಅದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಈ ವೇಳೆ ವೇದಿಕೆ ಕಾರ್ಯಕ್ರಮ ಮತ್ತು ಜಾಥಾದಲ್ಲಿ ಸ್ಪೀಕರ್ ಯು.ಟಿ. ಖಾದರ್, ಸಂಸದ ಬೃಜೇಶ್ ಚೌಟ, ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ದಿ ಸ್ಟೇಟ್ ಅಲೈಡ್ ಆಂಡ್ ಹೆಲ್ತ್ಕೇರ್ ಕೌನ್ಸಿಲ್ನ ಮುಖ್ಯಸ್ಥರಾದ ಡಾ. ಯು.ಟಿ ಇಪ್ತಿಕಾರ್ ಫರೀದ್, ಬೋರ್ಡ್ ಆಫ್ ಸ್ಟಡೀಸ್ ಯುಜಿ ಫಾರ್ಮಸಿ ಮುಖ್ಯಸ್ಥರಾದ ಡಾ. ಸಲೀಮುಲ್ಲಾ ಖಾನ್, ಗಾಯಕ ಮತ್ತು ನಟ ಗುರುಕಿರಣ್, ಸ್ಥಳೀಯ ರಾಜಕೀಯ ಮುಖಂಡರು, ವಿದ್ಯಾರ್ಥಿ ಯುವಜನರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿದಂತೆ ಹಲವರು ಭಾಗವಹಿಸಿದ್ದರು.

