Thu. Mar 5th, 2026

“ನನ್ನ ಪರವಾಗಿ ದೆಹಲಿಗೆ ಹೋಗಬೇಡಿ”: ಶಾಸಕರಿಗೆ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

Share this with Friends

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಗರಿಗೆದರಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ನನ್ನ ಪರವಾಗಿ ಯಾರೂ ದೆಹಲಿಗೆ ಹೋಗಿ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಬೇಡ” ಎಂದು ಅವರು ಶಾಸಕರು ಹಾಗೂ ಸಚಿವರಿಗೆ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬೆಂಬಲಕ್ಕೆ ನಿಂತಿರುವ ಶಾಸಕರಿಗೆ ದೆಹಲಿ ಪ್ರವಾಸ ಮಾಡದಂತೆ ಮನವಿ ಮಾಡಿದರು. “ನಿಮ್ಮ ವೈಯಕ್ತಿಕ ಸಮಸ್ಯೆಗಳಿದ್ದರೆ ಅಥವಾ ಮಂತ್ರಿ ಸ್ಥಾನದ ಆಕಾಂಕ್ಷೆ ಹೊಂದಿದ್ದರೆ ಹೈಕಮಾಂಡ್ ಭೇಟಿ ಮಾಡಿ. ಆದರೆ, ನನ್ನ ಪರವಾಗಿ ಮನವಿ ಸಲ್ಲಿಸಲು ಯಾರೂ ಹೋಗಬೇಡಿ” ಎಂದು ಹೇಳಿದರು.

ಶಕ್ತಿ ಪ್ರದರ್ಶನವಲ್ಲ:

ಶಾಸಕ ಎಸ್.ಟಿ. ಸೋಮಶೇಖರ್ ಅವರ ಜನ್ಮದಿನದ ನೆಪದಲ್ಲಿ 40ಕ್ಕೂ ಹೆಚ್ಚು ಶಾಸಕರು ಸಭೆ ಸೇರಿರುವುದು ಶಕ್ತಿ ಪ್ರದರ್ಶನವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, “ಇದರಲ್ಲಿ ಯಾವುದೇ ಶಕ್ತಿ ಪ್ರದರ್ಶನವಿಲ್ಲ. ಶಾಸಕರು ಭೋಜನ ಕೂಟಕ್ಕೆ ಸೇರುವುದು ಅವರ ವೈಯಕ್ತಿಕ ವಿಚಾರ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ,” ಎಂದರು.

ಹೊಸಬರಿಗೆ ಮಂತ್ರಿ ಸ್ಥಾನದ ಆಸೆ ಸಹಜ:

ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ನಾವು ಹಳಬರಾಗಿದ್ದೇವೆ. ಸಿದ್ದರಾಮಯ್ಯ, ಪರಮೇಶ್ವರ್, ಹೆಚ್.ಕೆ. ಪಾಟೀಲ್ ಮತ್ತು ನಾನು ಸಣ್ಣ ವಯಸ್ಸಿನಲ್ಲೇ ಮಂತ್ರಿಗಳಾಗಿದ್ದೆವು. ಈಗ ಹೊಸಬರಿಗೆ ಸಚಿವರಾಗುವ ಆಸೆ ಇರುವುದು ಸಹಜ. ಆಕಾಂಕ್ಷಿಗಳ ಆಸೆಯನ್ನು ನಾನು ಹೈಕಮಾಂಡ್ ಗಮನಕ್ಕೆ ತರುತ್ತೇನೆ,” ಎಂದು ಭರವಸೆ ನೀಡಿದರು.

“ಸತ್ಯಕ್ಕೆ ಸಂದ ಜಯ”: 

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಜಾಮೀನು ನೀಡಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದು, “ಯಾವುದೇ ವ್ಯಕ್ತಿಗೆ ಕಿರುಕುಳ ನೀಡಲು ಒಂದು ಮಿತಿ ಇರುತ್ತದೆ. ರಾಜಕೀಯ ದ್ವೇಷಕ್ಕಾಗಿ ಈ ಹಿಂದೆ ಮುಕ್ತಾಯಗೊಂಡಿದ್ದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಅವರಿಗೆ ತೊಂದರೆ ನೀಡಲಾಗಿತ್ತು” ಸ್ವಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧ ಹೇರಿ ಚುನಾವಣೆ ವೇಳೆ ಮತ ಕೇಳದಂತೆ ಮಾಡಿದ್ದು ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಮೊದಲು. ಈ ನೋವನ್ನು ನಾನೂ ಅನುಭವಿಸಿದ್ದೇನೆ. ಈಗ ನ್ಯಾಯಾಲಯವು ಅವರಿಗೆ ನ್ಯಾಯ ಒದಗಿಸಿದೆ, ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 56 ಸಾವಿರ ಹುದ್ದೆಗಳ ನೇಮಕಾತಿ

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಕುರಿತು ಮಾತನಾಡಿದ ಶಿವಕುಮಾರ್, “ಯುವಕರಿಗೆ ನೀಡಿದ ಭರವಸೆಯಂತೆ ಮೊದಲ ಹಂತದಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ಸಂಪುಟ ಅನುಮೋದನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಹಳೆಯ ಮೀಸಲಾತಿ ಅನ್ವಯವೇ ಪ್ರಕ್ರಿಯೆ ನಡೆಯಲಿದೆ. ಹಂತ ಹಂತವಾಗಿ ಒಟ್ಟು 2.84 ಲಕ್ಷ ಖಾಲಿ ಹುದ್ದೆಗಳನ್ನು ತುಂಬಲಾಗುವುದು” ಎಂದು ಭರವಸೆ ನೀಡಿದರು.

ಬೆಂಗಳೂರಿನ ದಾಹ ನೀಗಿಸಲು ‘ಕಾವೇರಿ 6ನೇ ಹಂತ’:

ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ಅಗತ್ಯಕ್ಕಾಗಿ 7 ಸಾವಿರ ಕೋಟಿ ರೂ. ವೆಚ್ಚದ ‘ಕಾವೇರಿ 6ನೇ ಹಂತದ ಯೋಜನೆ’ಗೆ ಸಂಪುಟ ಒಪ್ಪಿಗೆ ನೀಡಿದೆ. ಇದು ನಗರದ ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರವಾಗಿದ್ದು, ಜೈಕಾ (JICA) ನೆರವಿನೊಂದಿಗೆ ಈ ಬೃಹತ್ ಯೋಜನೆ ಸಾಕಾರಗೊಳ್ಳಲಿದೆ. ಈಗಾಗಲೇ 6 ಟಿಎಂಸಿ ನೀರನ್ನು ಬೆಂಗಳೂರಿಗೆ ಮೀಸಲಿಡಲು ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.


Share this with Friends

Related Post