Fri. Dec 27th, 2024

ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಕಿರುಕುಳ ನೀಡಬೇಡಿ: ಸಿಎಂ ಆದೇಶ

Share this with Friends

ಬೆಂಗಳೂರು,ಜೂ.11: ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಸನ್ನದುದಾರರಿಗೆ ಕಿರುಕುಳ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಕಡಕ್ ಸೂಚನೆ ನೀಡಿದ್ದಾರೆ.

ನೆರೆ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಕಳ್ಳಸಾಗಾಣಿಕೆ ಮೂಲಕ ನುಸುಳುವ ಮದ್ಯವನ್ನು ತಡೆಗಟ್ಟಲೇಬೇಕು ಎಂದು ಸಿಎಂ ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಸೂಚಿಸಿ ದರು.

ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ‌ ಸಿದ್ದರಾಮಯ್ಯ ಅವರು,
ಇಲಾಖೆಯ ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿ ನಿಗದಿ ಪಡಿಸುವ ಗುರಿ ತಲುಪಲು ಅಧಿಕಾರಿಗಳು ಗರಿಷ್ಠ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆ ಕಾರಣದಿಂದ ತೆರಿಗೆ ಸಂಗ್ರಹ ಬೆಳವಣಿಗೆ ದರ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಅಧಿಕಾರಿಗಳು ಹೇಳಿದ್ದಕ್ಕೆ ಮುಂದಿನ ದಿನಗಳಲ್ಲಿ ಇದನ್ನು ಭರ್ತಿ ಮಾಡುವಂತೆ ಸಿಎಂ ಸೂಚಿಸಿದರು.

ಇಲಾಖೆಯಲ್ಲಿ ಕಾನ್ಸ್‌ಟೇಬಲ್‌, ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಾಗೂ ವಾಹನಗಳ ಅಗತ್ಯತೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದು ಸಲಹೆ ನೀಡಿದರು.

ಕರ ಸಮಾಧಾನ ಯೋಜನೆಯಡಿ 5.10 ಕೋಟಿ ರೂ. ವಸೂಲಾಗಿದ್ದು, ಯೋಜನೆಯನ್ನು ಇನ್ನಷ್ಟು ಕಾಲ ವಿಸ್ತರಿಸುವಂತೆ ಅಧಿಕಾರಿಗಳು ಈ ವೇಳೆ‌ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.

ಇದೇ ವೇಳೆ ಅಬಕಾರಿ ಇಲಾಖೆಯ ವ್ಯವಹಾರಗಳನ್ನು ಸರಳಗೊಳಿಸುವ ನೂತನ ತಂತ್ರಾಂಶವನ್ನು ಸಿಎಂ ಲೋಕಾರ್ಪಣೆ ಮಾಡಿದರು.

ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಹಾಗೂ ನಸೀರ್ ಅಹ್ಮದ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ಪಿ.ಸಿ.ಜಾಫರ್, ಅಬಕಾರಿ ಇಲಾಖೆಯ ಆಯುಕ್ತ ಡಾ. ರವಿಶಂಕರ್ ಉಪಸ್ಥಿತರಿದ್ದರು.


Share this with Friends

Related Post