Fri. Nov 1st, 2024

ಗ್ಯಾರಂಟಿ ಯೋಜನೆಗಳ ಐದು ಕೋಟಿ ಫಲಾನುಭವಿಗಳ ಅವಮಾನಿಸಬೇಡಿ: ಸಿ.ಎಂ

Share this with Friends

ಮೈಸೂರು, ಮಾ.15: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಐದು ಕೋಟಿ ಫಲಾನುಭವಿಗಳನ್ನು ಅವಮಾನಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಮ್ಮ ಸರ್ಕಾರದ ಗ್ಯಾರಂಟಿಗಳು ಕನ್ನಡ ನಾಡಿನ ಜನತೆಯ ಹಕ್ಕು ಎಂಬುದನ್ನು ಮರೆಯಬೇಡಿ ಎಂದು ಬಿಜೆಪಿ ನಾಯಕರಿಗೆ ಸೂಚ್ಯವಾಗಿ ಹೇಳಿದರು.

ಮೈಸೂರಿನಲ್ಲಿಂದು ಆಯೋಜಿಸಿದ್ದ ಚಾರಿತ್ರಿಕ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಗ್ಯಾರಂಟಿಗಳು ಬಿಜೆಪಿಯವರ ಮನೆ ಬಾಗಿಲಿಗೂ ಮುಟ್ಟಿದೆ. ಬಿಜೆಪಿಯ ಮತದಾರರೂ ಕಾಂಗ್ರೆಸ್ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ,ಅವರನ್ನು ಅವಮಾನಿಸಬೇಡಿ,ನಮ್ಮ ಗ್ಯಾರಂಟಿಗಳು ನಾಡಿನ‌ ಜನರ ಹಕ್ಕು ಎಂದು ಮತ್ತೆ ಹೇಳಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯೇ ಆಗಲ್ಲ ಎಂದು ಬಿಜೆಪಿಯವರು ಹೇಳಿದ್ದರು,ನಾವು ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ, ಆಗ ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹಬ್ಬಿಸಿದರು, ಆದರೆ ನಾವು ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಮೀಸಲಿಟ್ಟೆವು, ಬಿಜೆಪಿಯ ಈ ಮಾತು ಕೂಡ ಸುಳ್ಳಾಯಿತು ಎಂದು ಸಿಎಂ ಹೇಳಿದರು.

ಬಿಜೆಪಿಯವರು ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡು, ಸುಳ್ಳು ಹೇಳಿ, ನಮ್ಮ ಗ್ಯಾರಂಟಿಗಳು ಯಶಸ್ವೀ ಜಾರಿಯಾದ ಬಳಿಕ ನಮ್ಮದೇ ಗ್ಯಾರಂಟಿ ಸ್ಕೀಂಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಸುಳ್ಳುಗಳನ್ನೇ ನುಡಿದಿದ್ದಾರೆ,ತಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂ ಹಾಕುವುದಾಗಿ ಮೋದಿ ಘೋಷಿಸಿದ್ದರು.15 ಲಕ್ಷ ಇರಲಿ,15 ಪೈಸೆನಾದ್ರು ಯಾರಿಗಾದರೂ ಹಾಕಿದರಾ ಎಂದು ಪ್ರಶ್ನಿಸಿದರು.

ಮೈಸೂರು ಜಿಲ್ಲೆಯ ಅಭಿವೃದ್ಧಿಗೆ- ಮೈಸೂರು ಜನರ ಪ್ರಗತಿಗೆ ಬಿಜೆಪಿ ಇವತ್ತಿನವರೆಗೂ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಲೇ ಇಲ್ಲ ಏಕೆ ಎಂದು ಸಿದ್ದರಾಮಯ್ಯ ಆಕ್ರೋಶದಿಂದ ಕೇಳಿದರು.

ಆಸ್ಪತ್ರೆ, ಕಾಲೇಜು, ಮಾರುಕಟ್ಟೆ , ರಸ್ತೆ, ನೀರು ಸೇರಿ ಮೈಸೂರಿನ ಎಲ್ಲಾ ಪ್ರಗತಿ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನ ನೀಡುತ್ತಲೇ ಬಂದಿದೆ. ಈ ಬಜೆಟ್ ನಲ್ಲೂ ಹಣ ಮೀಸಲಿಟ್ಟಿದ್ದೇವೆ ಎಂದು ವಿವರಿಸಿದರು.

ಸಚಿವರಾದ ಕೆ.ವೆಂಕಟೇಶ್, ಹೆಚ್.ಸಿ.ಮಹದೇವಪ್ಪ, ಮಾಜಿ ಸಚಿವ ಶಾಸಕ ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಜಾರಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರ್ ನಾಥ್,ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಉಪಸ್ಥಿತರಿದ್ದರು.

ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರು ಪಾಲ್ಗೊಂಡಿದ್ದರು.


Share this with Friends

Related Post