ಬೆಂಗಳೂರು, ಮಾ.14: ಹಿರಿಯ ನಾಗರೀಕರು ಸೇರಿದಂತೆ ಜನರು ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಆಶಾಕಿರಣ ಯೋಜನೆ ಜಾರಿಗೆ ತಂದಿದೆ.
ಮನೆ ಬಾಗಿಲಿಗೆ ಬಂದು ನೇತ್ರ ತಪಾಸಣೆ ಸೇವೆ ಮಾಡಿ ಉಚಿತ ಕನ್ನಡಕವನ್ನು ವಿತರಣೆ ಮಾಡುವ ಸಲುವಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.
ಈ ಆಶಾಕಿರಣ ಯೋಜನೆಗೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಹೊಸ ಡಿಜಿಟಲ್ ಆರೋಗ್ಯ ತಂತ್ರಜ್ಞಾನ ಬಳಸಿಕೊಂಡು ಸಮಗ್ರ ಕಣ್ಣಿನ ಆರೈಕೆ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಸಿ-ಕ್ಯಾಂಪ್ ಮತ್ತು ಆಕ್ಟ್ ಫಾರ್ ಹೆಲ್ತ್ ನೊಂದಿಗೆ ಆರೋಗ್ಯ ಇಲಾಖೆಯು ಜತೆಯಾಗಿದೆ.
ಇದೀಗ ಈ ಯೋಜನೆಯನ್ನು ರಾಜ್ಯ ಸಾರಿಗೆ ಇಲಾಖೆಯ ಎಲ್ಲ ಸಿಬ್ಬಂದಿಗೂ ವಿಸ್ತರಿಸಲಾಗುತ್ತಿದೆ ಎಂದು ಈ ವೇಳೆ ರಾಮಲಿಂಗ ರೆಡ್ಡಿ ತಿಳಿಸಿದರು.
ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಮತ್ತು ಬಸ್ ಡಿಪೋಗಳಲ್ಲಿ ಕಣ್ಣಿನ ವಕ್ರೀಕಾರಕ ದೋಷಗಳು ಮತ್ತು ರೆಟಿನೋಪತಿ ಯಂತಹ ಸಮಸ್ಯೆಗಳಿಗೆ ಉಚಿತ ನೇತ್ರ ತಪಾಸಣೆ ನಡೆಸಲು ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸಿ-ಕ್ಯಾಂಪ್ ನಿರ್ದೇಶಕ ಡಾ.ತಸ್ಲೀಮಾರೀಫ್ ಸೆಯ್ಯದ್, ಆಕ್ಟ್ ಸಂಸ್ಥೆಯ ಸದಸ್ಯ ಸಂದೀಪ್ ಸಿಂಘಲ್, ಕ್ರಿಶಾ ಮಾಥುರ್ ಮತ್ತಿತರರು ಉಪಸ್ಥಿತರಿದ್ದರು.