Tue. Dec 24th, 2024

ಸಿಎಂ ಸಿದ್ದರಾಮಯ್ಯನವರ ಕಾಲ್ಗುಣದಿಂದ ರಾಜ್ಯದಲ್ಲಿ ಬರಗಾಲ- ಆರ್‌.ಅಶೋಕ್

Share this with Friends

ದಾವಣಗೆರೆ, ಮಾ.15: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲ್ಗುಣದಿಂದ ರಾಜ್ಯದಲ್ಲಿ ಬರಗಾಲ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಕೋಟಿಗಟ್ಟಲೆ ರೂಪಾಯಿ ಸಾಲ ಮಾಡುವುದರ ಜೊತೆಗೆ, ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ನೀಡಿಲ್ಲ ಎಂದು ಆರೋಪಿಸಿದರು.

ದಾವಣಗೆರೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರ ರಿಪೋರ್ಟ್‌ ಕಾರ್ಡ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ಬಂದ ಹಿಂದೂಗಳು ರಸ್ತೆ ಬದಿಯಲ್ಲಿ ಬದುಕುತ್ತಿದ್ದಾರೆ, ಇದುವರೆಗೆ ಅವರಿಗೆ ಬದುಕುವ ಅವಕಾಶವನ್ನೇ ನೀಡಲಿಲ್ಲ, ಕಾಂಗ್ರೆಸ್‌ನವರಿಗೆ ಕರುಣೆಯೇ ಇಲ್ಲ, ಆದರೆ ಅವರಿಗೆ ಪೌರತ್ವವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರದಿಂದಾಗಿ ವಿಧಾನಸೌಧದಲ್ಲೇ ಪಾಕಿಸ್ತಾನಕ್ಕೆ ಜೈಕಾರ ಹಾಕಿದರು, ಅವರಿಗೆ ಸರ್ಕಾರ ಬಿರಿಯಾನಿ ಕೊಟ್ಟು ಕಳುಹಿಸಿದೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹೆಸರಿನಲ್ಲೇ ರಾಮ ಇದ್ದಾನೆ ಎನ್ನುತ್ತಾರೆ. ಹಾಗೆಯೇ ವೀರಪ್ಪನ್‌ ಕೂಡ ದೇವರ ಹೆಸರು ಇಟ್ಟುಕೊಂಡಿದ್ದ ದೇವರ ಹೆಸರು ಹೃದಯದಲ್ಲಿ ಇರಬೇಕು ರಾಮಮಂದಿರ ಕಟ್ಟಿದರೂ ಕಾಂಗ್ರೆಸ್‌ ನಾಯಕರು ಅಲ್ಲಿಗೆ ಹೋಗಲಿಲ್ಲ. ಮೋದಿಯವರು ಇಲ್ಲದಿದ್ದರೆ ಮಂದಿರ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ರಾಮನ ಹೆಸರಿನಿಂದ ಬೆಂಕಿ ಹೊತ್ತಿಕೊಳ್ಳುವುದಿಲ್ಲ ಆದರೆ ಜ್ಯೋತಿ ಇರುತ್ತದೆ ಎಂದು ಟಾಂಗ್ ನೀಡಿದರು.

2013 ರಿಂದ 2018 ರವರೆಗೆ ಬರಗಾಲ ಇತ್ತು, ಈಗಲೂ ಇದೆ. ಬಿಜೆಪಿ ಸರ್ಕಾರ ಬಂದ ಕೂಡಲೇ ವಿಪರೀತ ಮಳೆಯಾಗಿತ್ತು. ಅಂದು ಜಲಾಶಯಗಳು ತುಂಬಿದ್ದವು ಈಗ ಬರಿದಾಗಿದೆ. ಕುಡಿಯಲು ನೀರು, ಗೋವುಗಳಿಗೆ ಮೇವು ಇಲ್ಲ. ಒಂದೇ ಒಂದು ಗೋಶಾಲೆಯನ್ನೂ ನಿರ್ಮಿಸಿಲ್ಲ ಎಂದು ಕಿಡಿಕಾರಿದರು.

ಇವರು ಹೇಳುವ ಅನ್ನಭಾಗ್ಯ ವಾಸ್ತವದಲ್ಲಿ ಮೋದಿ ಭಾಗ್ಯವಾಗಿದೆ. ಒಂದು ಕಾಳು ಅಕ್ಕಿಯನ್ನೂ ಇವರು ನೀಡಿಲ್ಲ. ಮನೆಮನೆಗೆ ಕೊಳಾಯಿ ನೀರು ನೀಡುತ್ತೇವೆಂದು ಹೇಳಿದರೂ ಅದನ್ನು ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ನಡಿ ನೀಡಲಾಗುತ್ತಿದೆ ಎಂದು ಅಶೋಕ್ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಮೋಸದ ಗಿರಾಕಿ,ಬಡಜನರು ಹಗಲಿಡೀ‌ ಕಷ್ಟಪಟ್ಟು ದುಡಿದು ಸಂಜೆ ಎಣ್ಣೆ ಹಾಕಲು ಹೋದರೆ ಅದರ ದರವನ್ನೂ ಹೆಚ್ಚಿಸಿದ್ದಾರೆ ಎಂದು ಅಶೋಕ ದೂರಿದರು.


Share this with Friends

Related Post