ಬೆಂಗಳೂರು: ರಾಜ್ಯವನ್ನು ಮಾದಕ ವಸ್ತುಗಳ ಪಿಡುಗಿನಿಂದ ಮುಕ್ತಗೊಳಿಸುವ ದೃಢ ಸಂಕಲ್ಪದೊಂದಿಗೆ, ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಾದಕ ವ್ಯಸನಿಗಳ ಪುನರ್ವಸತಿ ಮತ್ತು ಸಮಾಲೋಚನೆಗಾಗಿ ಮೀಸಲಾದ ವಿಶೇಷ ಸಹಾಯವಾಣಿ ‘ವಿಮುಕ್ತಿ’ (Vimukti) ಗೆ ಇಂದು ಅಧಿಕೃತವಾಗಿ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಮೈಸೂರು ನಗರದಲ್ಲಿ ನಿರ್ಮಿಸಲಾದ ಸಿದ್ಧಾರ್ಥನಗರ ಸಂಚಾರ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಉದ್ಘಾಟಿಸಿದರು ನಂತರ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ ಡ್ರಗ್ಸ್ ಚಟುವಟಿಕೆಯ ಕುರಿತು ಕಂಡು ಬರುವ ಮಾಹಿತಿಯನ್ನು ಕೂಡಲೇ ಪೊಲೀಸರಿಗೆ ಹಂಚಿಕೊಳ್ಳಲು ಆರಂಭಿಸಲಾದ ‘ವಿಮುಕ್ತಿ’ 8277948080 ವಾಟ್ಸಪ್ ಸಹಾಯವಾಣಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಮಾದಕ ವ್ಯಸನವು ಕೇವಲ ವ್ಯಕ್ತಿಯನ್ನಷ್ಟೇ ಅಲ್ಲದೆ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಯುವಜನತೆಯನ್ನು ಈ ವಿಷವರ್ತುಲದಿಂದ ಹೊರತರಲು ಸರ್ಕಾರ ಈ ಮಹತ್ವದ ಹೆಜ್ಜೆಯನ್ನಿಟ್ಟಿದೆ,” ಎಂದು ತಿಳಿಸಿದರು.
ಸಹಾಯವಾಣಿಯ ಪ್ರಮುಖಾಂಶಗಳು:
ಸಾರ್ವಜನಿಕರು ಅಥವಾ ಮಾದಕ ವ್ಯಸನಕ್ಕೆ ತುತ್ತಾದವರು ಯಾವುದೇ ಸಮಯದಲ್ಲಿ ನೆರವಿಗಾಗಿ 1920 ಸಂಖ್ಯೆಗೆ ಕರೆ ಮಾಡಬಹುದು. 8277948080 ಸಂಖ್ಯೆಗೆ ವಾಟ್ಸ್ ಆಪ್ ಮಾಡಬಹುದು, ಈ ಸಹಾಯವಾಣಿಯು ವಾರದ ಏಳೂ ದಿನಗಳ ಕಾಲ, ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ.ಕರೆ ಮಾಡುವವರ ಮಾಹಿತಿಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದರು.
ಸಮಾಲೋಚನೆ ಮತ್ತು ಚಿಕಿತ್ಸೆ: ನುರಿತ ಮನೋವೈದ್ಯಕೀಯ ಸಮಾಲೋಚಕರು ಕರೆ ಸ್ವೀಕರಿಸಿ, ಅಗತ್ಯವಿರುವವರಿಗೆ ಸರ್ಕಾರಿ ಪುನರ್ವಸತಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ಮಾರ್ಗದರ್ಶನ ನೀಡಲಿದ್ದಾರೆ.
ಕಟ್ಟುನಿಟ್ಟಿನ ಕ್ರಮ:
ಕೇವಲ ಜಾಗೃತಿಯಷ್ಟೇ ಅಲ್ಲದೆ, ಡ್ರಗ್ಸ್ ಜಾಲವನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಗೆ ಮುಕ್ತ ಅಧಿಕಾರ ನೀಡಲಾಗಿದೆ. ಶಾಲಾ-ಕಾಲೇಜುಗಳ ಸುತ್ತಮುತ್ತ ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

