ಬೆಂಗಳೂರು:ಸಧ್ಯದ ಮಟ್ಟಿಗೆ ಮೊಟ್ಟೆ ಸೇವಿಸುವವರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ, ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸ್ಪಷ್ಟೀಕರಣ ನೀಡಿದ ಅವರು,ಮೊಟ್ಟೆಯಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳು ಕಂಡುಬಂದಿವೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ವದಂತಿಗೆ ಜನರು ಭಯಪಡುವ ಅಗತ್ಯ ಇಲ್ಲ.ರಾಜ್ಯಾದ್ಯಂತ ಉಂಟಾಗಿರುವ ಆತಂಕವನ್ನು ಗಂಭೀರವಾಗಿ ಪರಿಗಣಿಸಿ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದೆ ಎಂದರು.
ಮೊಟ್ಟೆಗಳ ಬಗೆಗೆ ಉಂಟಾಗಿರುವ ಸಂಶಯಕ್ಕೆ ಅನುಸಾರವಾಗಿ ಪರೀಕ್ಷೆ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ, ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಇದೇ ರೀತಿಯಲ್ಲಿ ಈ ಹಿಂದೆ ಮೊಟ್ಟೆ ವಿಚಾರದಲ್ಲಿ ವದಂತಿ ಹರಡಿದಾಗ ನಡೆಸಿದ್ದ ಪರೀಕ್ಷೆಗಳಲ್ಲಿ ಮೊಟ್ಟೆಯಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳು ಕಂಡುಬಂದಿರಲಿಲ್ಲ ಹಾಗಾಗಿ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯಿದೆ ಹಾಗಾಗಿ ನಾಗರೀಕರು ನಿರ್ಭೀತಿಯಿಂದ ಇರಬೇಕು ಎಂದು ಕೋರಿದ್ದಾರೆ.

