Fri. Mar 6th, 2026

ರಾಜ್ಯದ ಉದ್ಯೋಗ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಸಕ ಅರವಿಂದ ಬೆಲ್ಲದ ಪತ್ರ

Share this with Friends

ಬೆಂಗಳೂರು: ಕರ್ನಾಟಕದ ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯದ ದೃಷ್ಟಿಯಿಂದ ಹಾಗೂ ರಾಜ್ಯದಲ್ಲಿ ಉಂಟಾಗಿರುವ ಆಡಳಿತಾತ್ಮಕ ಬಿಕ್ಕಟ್ಟನ್ನು ಪರಿಹರಿಸಲು ಕೋರಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಸುಮಾರು 2.86 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಅಂದಾಜಿಸಿದೆ. ಅಧಿಕಾರಕ್ಕೆ ಬರುವ ಮುನ್ನ ಈ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಈವರೆಗೆ ಕೇವಲ 8,157 ಹುದ್ದೆಗಳನ್ನಷ್ಟೇ ನೇಮಕ ಮಾಡಿಕೊಂಡಿದೆ. ಸರ್ಕಾರದ ಈ ಆಮೆಗತಿಯ ನಡವಳಿಕೆಯಿಂದಾಗಿ ಪರೀಕ್ಷೆಗಾಗಿ ವರ್ಷಗಟ್ಟಲೆ ಸಿದ್ಧತೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಬೆಲ್ಲದ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಪಾರದರ್ಶಕತೆಯ ಕೊರತೆ:

ಸರ್ಕಾರಿ ನೇಮಕಾತಿಗಳಲ್ಲಿ ಕಾಲಮಿತಿಯ ಮಾರ್ಗಸೂಚಿಗಳಿಲ್ಲದಿರುವುದು ಮತ್ತು ಪಾರದರ್ಶಕತೆಯ ಕೊರತೆಯಿಂದಾಗಿ ಯುವಜನರಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಕುಸಿಯುತ್ತಿದೆ. ಕಳೆದ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಶಿಕ್ಷಣ ಮತ್ತು ಪೊಲೀಸ್ ಇಲಾಖೆಯ ಬೃಹತ್ ನೇಮಕಾತಿಗಳನ್ನು ಉಲ್ಲೇಖಿಸಿರುವ ಅವರು, ಪ್ರಸ್ತುತ ಉಂಟಾಗಿರುವ ಶೂನ್ಯ ಸ್ಥಿತಿಯು ರಾಜ್ಯದ ಆಡಳಿತ ಯಂತ್ರದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹಕ್ಕೊತ್ತಾಯದ ದಮನ:

ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ಸರ್ಕಾರವು ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುತ್ತಿದೆ. ಶಾಂತಿಯುತ ಪ್ರತಿಭಟನಾಕಾರರಿಗೆ ನ್ಯಾಯ ಒದಗಿಸುವ ಬದಲು ನಿರ್ಬಂಧ ಹೇರುತ್ತಿರುವುದು ಆತಂಕಕಾರಿ ಎಂದು ಬೆಲ್ಲದ ಹೇಳಿದ್ದಾರೆ.

ಕರ್ನಾಟಕದ ಯುವಜನತೆಯ ಆಕಾಂಕ್ಷೆಗಳನ್ನು ಕಡೆಗಣಿಸದೆ, ಅವರಿಗೆ ಸಾಂಸ್ಥಿಕ ನ್ಯಾಯ ದೊರಕಿಸಿಕೊಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ


Share this with Friends

Related Post