Tue. Dec 24th, 2024

ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿ:ಸಿದ್ದರಾಮಯ್ಯ

Share this with Friends

ಬೆಂಗಳೂರು,ಫೆ.24: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನ ದಲಿತರ ಉದ್ದಾರಕ್ಕಾಗಿದೆ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬೇಸರ ಪಟ್ಟರು.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸ್ಪಷ್ಟವಾಗಿ ಹೇಳುವುದರಿಂದ ಇದರ ವಿರುದ್ಧ ಇರುವ ಜನರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.1950 ಜನವರಿ 26 ರಿಂದ ಜಾರಿಗೆ ಬಂದಾಗಿನಿಂದ ಈ ಅಪಪ್ರಚಾರ ನಡೆಯುತ್ತಿದೆ, ಇದನ್ನು ನಾವು ಯಾರೂ ಸಹಿಸಬಾರದು, ಸಂವಿಧಾನ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ ಎಂದು ಎಚ್ಚರಿಸಿದರು.

ದೇಶದಲ್ಲಿ ಅಸಮಾನತೆಯನ್ನು ತೊಲಗಿಸಬೇಕು. ನಾವು ವೈರುಧ್ಯ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಅಸಮಾನತೆಯುಳ್ಳ ಸಮಾಜದಲ್ಲಿ ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ಅಸಮಾನತೆಯಿಂದ ನರಳುವವರು ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು. ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿ. ಸಂವಿಧಾನ ಯಶಸ್ವಿಯಾಗಲು ಇದು ಯಾರ ಕೈಯಲ್ಲಿ ಇದೆ ಎನ್ನುವುದು ಮುಖ್ಯ
ಸಂವಿಧಾನ, ಸಮಾನತೆ, ಮಾನವ ಸಮಾಜದ ನಿರ್ಮಾಣದ ಪರವಾಗಿರುವವರ ಕೈಯಲ್ಲಿದ್ದರೆ ಸಂವಿಧಾನ ಯಶಸ್ವಿಯಾಗುತ್ತದೆ.

ಸಂವಿಧಾನಕ್ಕೆ ವಿರುದ್ಧವಾಗಿರುವವರ ಕೈಯಲ್ಲಿದ್ದರೆ ನಮಗೆ ಉಳಿಗಾಲವಿಲ್ಲ. ಸಂವಿಧಾನದ ಆಶಯಗಳು ಈಡೇರಲು ಸಂವಿಧಾನದ ಪರವಾಗಿರುವವರ ಕೈಯಲ್ಲಿ ಅಧಿಕಾರವಿರಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅನೇಕ ದೇಶಗಳ ಸಂವಿಧಾನ ಓದಿ ಅರ್ಥ ಮಾಡಿಕೊಂಡು ದೇಶದ ಸಮಸ್ಯೆಗಳಿಗೆ ಅಪರಿಹಾರ ಸೂಚಿಸುವ ರೀತಿಯಲ್ಲಿ ಸಂವಿಧಾನ ರಚಿಸಿದ್ದಾರೆ,ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನ,
ಸಂವಿಧಾನ ಜಾರಿಯಾದ ಅಮೃತ
ಸಂವಿಧಾನವನ್ನು ಓದಬೇಕೆಂದು ಸಿಎಂ ಸಲಹೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಡಾ: ಹೆಚ್.ಸಿ.ಮಹದೇವಪ್ಪ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ , ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಸೋಮಶೇಖರ್,ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಉಪಸ್ಥಿತರಿದ್ದರು.


Share this with Friends

Related Post