Mon. Dec 23rd, 2024

ಈಶ್ವರಪ್ಪ ಮನವೊಲಿಕೆ ಯತ್ನ ವಿಫಲ

Share this with Friends

ಶಿವಮೊಗ್ಗ,ಮಾ.17: ಮಗನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯ ಎದ್ದಿರುವ ಈಶ್ವರಪ್ಪ ಅವರ ಮನವೊಲಿಕೆ ಪ್ರಯತ್ನ ವಿಫಲವಾದಂತಾಗಿದೆ.

ಈಶ್ವರಪ್ಪ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡ್ತೀನಿ,ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಮೊನ್ನೆ ಶಿವಮೊಗ್ಗದ ಕಾರ್ಯಕರ್ತರು ಹಿತೈಷಿಗಳು ಸಭೆ ಮಾಡಿ ಅಭಿಪ್ರಾಯ ಹೇಳಿದ್ದಾರೆ. ಅಷ್ಟು ಜನ ಸೇರುತ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ, ನಾನು ಈಗಾಗಲೇ ಘೋಷಣೆ ಮಾಡಿದ್ದೇನೆ ಅದರಂತೆ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡ್ತೇನೆ ಎಂದು ಹೇಳಿದರು.

ನನ್ನ ಮನವೊಲಿಸಲು ಆರಗ ಜ್ಞಾನೇಂದ್ರ, ರವಿಕುಮಾರ್, ಅರುಣ್ ಬಂದಿದ್ದರು ಆದರೆ ನಾನು ಯಾರ ಮಾತನ್ನೂ ಒಪ್ಪಲಿಲ್ಲ ಎಂದು ತಿಳಿಸಿದರು.

ನಾನು ಚುನಾವಣೆಗೆ ಏಕೆ ಸ್ಪರ್ಧೆ ಮಾಡ್ತಿದ್ದೇನೆ ಎಂಬುದನ್ನು ಅವರ ಗಮನಕ್ಕೆ ತಂದೆ. ರಾಜ್ಯದ ಬಿಜೆಪಿಯ ಹಲವು ನಾಯಕರಿಗೆ ಮೋಸ ಮಾಡಿದ್ದಾರೆ, ಹಿಂದುತ್ವದ ಪರವಾಗಿ ಕೆಲಸ ಮಾಡಿದವರಿಗೆ ಮೋಸ ಮಾಡಿದ್ದಾರೆ. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಪಕ್ಷ ಇದ್ದು ಒದ್ದಾಡುತ್ತಿದೆ ಎಂದು ಗರಂ ಆಗಿ ನುಡಿದರು.

ಯಡಿಯೂರಪ್ಪ ಲಿಂಗಾಯತ ನಾಯಕರು, ವರಿಷ್ಠರು ಅವರನ್ನು ನಂಬಿದ್ದಾರೆ. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಪಡೆದಿದ್ದು 6 ಸೀಟುಗಳು ಇದು ಯಡಿಯೂರಪ್ಪ ಅವರ ನಾಯಕತ್ವ ಎಂದು ಚಾಟಿ ಬೀಸಿದರು.

ಲಿಂಗಾಯತ ನಾಯಕರು ಬೇಕು ಅಂದ್ರೆ ಯತ್ನಾಳ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು, ಯಡಿಯೂರಪ್ಪ ಹಠ ಹಿಡಿದು ತಮ್ಮ ಮಗನನ್ನು ಅಧ್ಯಕ್ಷರನ್ನಾಗಿ ಮಾಡಿದರು. ಒಕ್ಕಲಿಗರನ್ನು ಮಾಡುವುದಾದರೆ ಸಿ.ಟಿ.ರವಿ ಮಾಡಬಹುದಿತ್ತು. ಸಿ.ಟಿ.ರವಿ ಯಾವುದರಲ್ಲಿ ಕಡಿಮೆ ಆಗಿದ್ದರು ಅವರಿಗೆ ಏಕೆ ಟಿಕೆಟ್ ತಪ್ಪಿಸಿದರು ಎಂದು ಬಿಎಸ್‌ವೈ ವಿರುದ್ಧ ಹರಿಹಾಯ್ದರು.

ಹಿಂದುಳಿದ ವರ್ಗದ ನಾಯಕನನ್ನು ಅಧ್ಯಕ್ಷರಾಗಿ ಮಾಡುವುದಾದರೆ ನನ್ನ ಏಕೆ ಮಾಡಲಿಲ್ಲ. ನಾನು ಯಾವುದರಲ್ಲಿ ಕಡಿಮೆ ಇದ್ದೆ. ನಾನು ಯಾವಾಗ ಪಕ್ಷ ತೊರೆದು ಹೊರಗೆ ಹೋಗಿದ್ದೆ. ಪಕ್ಷ ಹೇಳಿದಾಗಲೆಲ್ಲಾ ನಾನು ಪಕ್ಷಕ್ಕೆ ರಾಜೀನಾಮೆ ನೀಡಿದೆ. ಯಡಿಯೂರಪ್ಪ, ವಿಜಯೇಂದ್ರ ತಾಯಿಯಂತಿರುವ ಪಕ್ಷದ ಕುತ್ತಿಗೆ ಹಿಸುಕುತ್ತಿದ್ದಾರೆ. ಆ ಪಕ್ಷ ರಕ್ಷಣೆಗೆ ನಾನು ಸ್ಪರ್ಧೆ ಮಾಡ್ತಿದ್ದೇನೆ. ಯಡಿಯೂರಪ್ಪ ಹಾಗೂ ಕುಟುಂಬದಿಂದ ಪಕ್ಷ ರಕ್ಷಣೆ ಆಗಬೇಕು. ಇದಕ್ಕಾಗಿ ನನ್ನ ಸ್ಪರ್ಧೆ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಕಡಕ್ಕಾಗಿ ಪುನರುಚ್ಚರಿಸಿದರು.

ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಬೇಡಿ ಅಂತಾ ರಾಜ್ಯದಿಂದ ಹಲವರು ಪೋನ್ ಮಾಡಿ ಹೇಳಿದ್ದಾರೆ. ಅವರೆಲ್ಲರ ಒತ್ತಾಯಕ್ಕಾಗಿ ಸ್ಪರ್ಧೆ ಮಾಡ್ತಿದ್ದೇನೆ. ಯಾರು ಮನವೊಲಿಸಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶ್ರೀ ಆನಂದ ಗುರೂಜಿ ಅವರು ಮನೆಗೆ ಭೇಟಿ ನೀಡಿದ್ದರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಆಶೀರ್ವಾದ ಮಾಡಿದ್ದಾರೆ ಇದು ನನಗೆ‌ ಸಂತಸ ತಂದಿದೆ ಎಂದು ಈಶ್ವರಪ್ಪ ತಿಳಿಸಿದರು.


Share this with Friends

Related Post