ಬೆಂಗಳೂರು ಜೂ 6: ದೈಹಿಕ ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
ಜೀವನಶೈಲಿ ಮತ್ತು ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ವರ್ಗದ ಜನರಿಗೂ ಆರೋಗ್ಯ ಮತ್ತು ಅಗತ್ಯ ಚಿಕಿತ್ಸೆ ಒದಗಿಸಲು ಕಾರ್ಯಕ್ರಮಗಳನ್ನು ರೂಪಿಸಿ, ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕ್ಯಾನ್ಸರ್ ನಂತಹ ಮಾರಕ ರೋಗವನ್ನೂ ಗುಣಪಡಿಸುವುದು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯ ಎಂದು ಹೇಳಿದರು.
ಹಿಂದಿನವರ ಆರೋಗ್ಯ ಪದ್ಧತಿ ಮತ್ತು ಶ್ರಮಾಧಾರಿತ ಜೀವನ ಶೈಲಿ ಅವರನ್ನು ಸದೃಡವಾಗಿ ಇಟ್ಟಿತ್ತು ಎಂದು ಸಿಎಂ ನುಡಿದರು.
ಸಹವಾಸ ದೋಷದಿಂದಲೂ ಅನಾರೋಗ್ಯ ತರುವ ಚಟಗಳು ಅಂಟಿಕೊಳ್ಳುತ್ತವೆ, ನಾನೂ ಮೊದಲು ಸಿಗರೇಟ್ ಸೇದುತ್ತಿದ್ದೆ, ಕಡಿಮೆ ಅವಧಿಯಲ್ಲಿ ಹೆಚ್ಚು ಸಿಗರೇಟ್ ಸೇದಿಬಿಟ್ಟಿದ್ದೆ ಅವತ್ತೇ ನನಗೆ ಮನವರಿಕೆ ಆಯ್ತು,ಅದು ಆಗಿದ್ದು ಆಗಸ್ಟ್ 27 ರಂದು ಅದೇ ದಿನ ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಇಂಥಾ ಆರೋಗ್ಯ ತಪಾಸಣಾ ಶಿಬಿರಗಳು ಮೇಲಿಂದ ಮೇಲೆ ಆಗಬೇಕು. ರಾಜ್ಯದ ಮೂಲೆ ಮೂಲೆಗಳಲ್ಲೂ ನಡೆಸಬೇಕು ಎಂದು ಅಧಿಕಾರಿಗಳಿಗೆ ಸಿದ್ದು ಸೂಚನೆ ನೀಡಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮುಖ್ಯ ಸಚೇತಕ ಅಶೋಕ್ ಪಟ್ಟಣ್ , ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.