Fri. Mar 6th, 2026

ಸಂಸದ ರಾಜಶೇಖರ ಹಿಟ್ನಾಳ್ ಉಚ್ಚಾಟನೆ ಮಾಡಿ:ಛಲವಾದಿ ನಾರಾಯಣಸ್ವಾಮಿ ಆಗ್ರಹ

Share this with Friends

ಬೆಂಗಳೂರು:ವಿದೇಶಿ ಮಹಿಳೆಯ ಅತ್ಯಾಚಾರ ಹಾಗು ಕೊಲೆ ಪ್ರಕರಣವನ್ನು ಸಣ್ಣ ಘಟನೆ ಎನ್ನುವ ಹೇಳಿಕೆ ನೀಡುವ ಮೂಲಕ ಸಂಸದ ರಾಜಶೇಖರ ಹಿಟ್ನಾಳ್ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದ್ದು ಕೂಡಲೇ ಕಾಂಗ್ರೆಸ್ ಪಕ್ಷ ಅವರನ್ನು  ಉಚ್ಚಾಟಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೊರದೇಶದಿಂದ ಪ್ರವಾಸಕ್ಕಾಗಿ ಬಂದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಇದೊಂದು ದೊಡ್ಡ ವಿಷಯವಾಗಿತ್ತು. ಇದು ಕೇವಲ ರಾಷ್ಟ್ರೀಯ ವಿಚಾರವಲ್ಲ; ಅಂತರರಾಷ್ಟ್ರೀಯ ವಿಚಾರ. ಇದನ್ನು ಎಂಪಿ (ಸಂಸದ) ರಾಜಶೇಖರ ಹಿಟ್ನಾಳ್ ಅವರು ಎಷ್ಟು ಕೇವಲವಾಗಿ ಹೇಳಿದ್ದಾರೆಂದರೆ, ಅದೊಂದು ಸಣ್ಣ (ಮೈನರ್) ಘಟನೆಯಂತೆ.ಇಷ್ಟೊಂದು ನೀಚತನಕ್ಕೆ ಅಧಿಕಾರ ನಡೆಸುವವರು ಇಳಿದರೆ ಏನೆನ್ನಬೇಕು?ಇವತ್ತು ಕರ್ನಾಟಕವೇ ದೇಶದ ಮುಂದೆ ತಲೆತಗ್ಗಿಸುವ ಕೆಲಸವನ್ನು ರಾಜಶೇಖರ ಹಿಟ್ನಾಳ್ ಅವರು ಮಾಡಿದ್ದಾರೆ. ಮೊದಲು ಅವರು ಕ್ಷಮೆ ಕೇಳಬೇಕು. ಕರ್ನಾಟಕದ ಗೌರವ ಹರಾಜಾಗಿದೆ; ಕಾಂಗ್ರೆಸ್ ಪಕ್ಷ ಅವರನ್ನು ಉಚ್ಚಾಟನೆ ಮಾಡಬೇಕು. ಅವರನ್ನು ಉಚ್ಚಾಟಿಸಿದರೆ ನಿಮ್ಮ ಪಕ್ಷ ಮಹಿಳೆಯರಿಗೆ ಗೌರವ ಕೊಡುತ್ತದೆ; ಇಂಥ ವಿಷಯದಲ್ಲಿ ಗಂಭೀರತೆ ಹೊಂದಿದೆ ಎಂದು ತಿಳಿಸಬಹುದು. ಇಲ್ಲವಾದರೆ, ನಿಮ್ಮ ಯೋಗ್ಯತೆ ಅಷ್ಟೇ ಎಂಬುದನ್ನು ನಾವು ಹೇಳಲೇಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಸರಕಾರವು ಪೊಲೀಸ್ ಇಲಾಖೆಯನ್ನು ನಿರ್ಲಿಪ್ತ ಮಾಡಿದೆ:

ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯವರ ಮಾಡೆಲ್ ಹೌಸ್ ಗೆ ಬೆಂಕಿ ಹಾಕುವ ಕೆಲಸ ನಿನ್ನೆ ನಡೆದಿದೆ. ಕಾಂಗ್ರೆಸ್ಸಿನ ದುರಾಡಳಿತ ಇನ್ನೂ ಯಾವ ಮಟ್ಟಕ್ಕೆ ಹೋಗಿದೆ ಎಂಬುದು ಈಗ ಗೊತ್ತಾಗುತ್ತಿದೆ. ಇವರೇ ಇವರ ಕಾರ್ಯಕರ್ತನನ್ನು ಕೊಲೆ ಮಾಡಿ, ಸರಕಾರದ ಹಣ 25 ಲಕ್ಷ ನಗದು ಕೊಟ್ಟಿದ್ದಾರೆ. ನಗದಾಗಿ ಹಣ ಕೊಡಲು ಆಗುವುದಿಲ್ಲ ಎಂದರು. ನಗದು ಕೊಡುವುದಾದರೆ, ಅದಕ್ಕೆ ಲೆಕ್ಕ ಇರಬೇಕು; ಆದಾಯ ತೆರಿಗೆ ಪಾವತಿ ಮಾಡಿರಬೇಕು. ಸರಕಾರದ ಹಣ ನೀವು ಚೆಕ್ ಮೂಲಕವೇ ಕೊಡಬೇಕಿತ್ತು ಎಂದು ತಿಳಿಸಿದರು. ನಾನು ಗೋಲ್ಡನ್ ಸ್ಪೂನ್ ಜೊತೆ ಹುಟ್ಟಿದ್ದಾಗಿ ಹೇಳುವ ಶಾಸಕ, ಅವನ ಕಡೆಯಿಂದ ಹಣ ಕೊಡಿಸಬೇಕಿತ್ತು ಎಂದು ಆಗ್ರಹಿಸಿದರು. ಕೊಲೆ ಮಾಡಿದ ಅವರನ್ನೇ ಬಂಧಿಸಬೇಕಿತ್ತು. ಇವತ್ತಿನ ವರೆಗೆ ಬಂಧಿಸಿಲ್ಲ ಎಂದು ಆಕ್ಷೇಪಿಸಿದರು.

ನಿಮ್ಮ ಪೊಲೀಸ್ ಇಲಾಖೆ ಏನು ಕಡುಬು ತಿನ್ನುತ್ತಿದೆಯೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರಕಾರವು ಪೊಲೀಸ್ ಇಲಾಖೆಯನ್ನು ನಿರ್ಲಿಪ್ತ ಮಾಡಿದೆ ಎಂದು ಟೀಕಿಸಿದರು. ಇದನ್ನು ಹೇಳಲು ಬಹಳ ನೋವಾಗುತ್ತದೆ. ನಮಗೂ ಕೂಡ ಸಿಟ್ಟು ಬರುತ್ತದೆ. ಆದರೆ, ನಾವು ಏನು ಮಾಡಬೇಕು ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಈಗ ಮನೆ ಸುಟ್ಟಾಯಿತಲ್ಲವೇ? ಏನು ಮಾಡುತ್ತೀರಿ?

ಜೀವ ಸಮೇತ ನಿಮ್ಮನ್ನು ಸುಡುತ್ತೇನೆ; ಮನೆ ಸುಡುತ್ತೇನೆ ಎಂದಿದ್ದರು. ಈಗ ಮನೆ ಸುಟ್ಟಾಯಿತಲ್ಲವೇ? ಎಂದು ಕೇಳಿದರು. ಅವರು ಇರುವ ಮನೆ ಸುಡಲು ಆಗಿಲ್ಲ; ಬೇರೊಂದು ಮನೆ ಸುಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಹೇಳಿಕೆ ಕೊಟ್ಟು ಮನೆ ಸುಟ್ಟಿದ್ದಾರೆ. ಈಗ ಏನು ಮಾಡುತ್ತೀರಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಮುಖ್ಯಮಂತ್ರಿಗಳೇ ನಿಮ್ಮ ದೇಹದಲ್ಲಿ ಸಮಾಜವಾದದ ರಕ್ತ ಹರಿಯುತ್ತಿದ್ದರೆ, ಸತ್ಯ, ಧರ್ಮ ಎತ್ತಿ ಹಿಡಿಯಬೇಕೆಂದಿದ್ದರೆ, ನಿಮಗೇನಾದರೂ ಮಾನವೀಯತೆ ಇನ್ನೂ ಉಳಿದಿದ್ದರೆ ಇವುಗಳ ಮೇಲೆ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.

ಏನೂ ಮಾಡದೇ ಇದ್ದವರನ್ನೂ ಜೈಲಲ್ಲಿ ಇಡುತ್ತೀರಿ:

ಶಿಡ್ಲಘಟ್ಟದಲ್ಲಿ ಅಧಿಕಾರಿ ಮೇಲೆ ರಾಜೀವ್ ಗೌಡ ದರ್ಪ ಮಾಡಿದ್ದರು. ಕೋರ್ಟಲ್ಲಿ ಅವರ ಎಫ್‍ಐಆರ್ ವಜಾ ಮಾಡಿ ಎಂದು ಕೊಟ್ಟಾಗ ತಿರಸ್ಕಾರ ಆಗುವವರೆಗೆ ಕಾಯುತ್ತಿದ್ದಿರಿ. ನೀವು ಅವರನ್ನು ಉಚ್ಚಾಟನೆ ಮಾಡಿಲ್ಲ; ಕೇವಲ ಅವರನ್ನು ಅಮಾನತಿನಲ್ಲಿ ಇಟ್ಟಿದ್ದೀರಿ. ನೀವೇ ಅವರನ್ನು ರಕ್ಷಣೆ ಮಾಡುತ್ತಿದ್ದೀರೆಂದು ಎಲ್ಲ ಕಡೆ ಬರುತ್ತಿದೆ. ಬೇರೆಯವರನ್ನು ಒಂದೆರಡು ಗಂಟೆಯಲ್ಲೇ ಹಿಡಿದುಕೊಂಡು ಬರುತ್ತೀರಿ. ಏನೂ ಮಾಡದೇ ಇದ್ದವರನ್ನೂ ಜೈಲಲ್ಲಿ ಇಡುತ್ತೀರಿ ಎಂದು ಆಕ್ಷೇಪಿಸಿದರು.


Share this with Friends

Related Post