ಬೆಂಗಳೂರು,ಫೆ.29: ನಗರದ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ನಿಗದಿ ಪಡಿಸಿದ್ದ ಗಡುವನ್ನು ವಿಸ್ತರಿಸಲಾಗಿದೆ.
ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮತ್ತಿರರಿಗೆ ಶೇ.60 ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಇನ್ನೂ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ ಕಾಲ ವಿಸ್ತರಿಸಲಾಗಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಅವರು,ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿಹಿಡಿಯುವುದು ಅತಿ ಮುಖ್ಯ. 2 ವಾರಗಳ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೇನೆ ಎಂದು ಬರೆದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 3 ಸಾವಿರ ಉದ್ದಿಮೆದಾರರು ಮಾತ್ರ ಶೇ 60 ರಷ್ಟು ನಿಯಮ ಪಾಲಿಸಬೇಕಿದೆ. ಬೆಂಗಳೂರಿನಲ್ಲಿ 55,178 ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ, ಕನ್ನಡ ನಿಯಮ ಉಲ್ಲಂಘನೆ ಮಾಡಿರುವ 55,178 ಉದ್ದಿಮೆದಾರರಿಗೆ ನೋಟಿಸ್ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
ನೋಟಿಸ್ ನೀಡಿದ ಬಳಿಕ ಈ ಉದ್ದಿಮೆದಾರರು ಶೇ. 60 ಕನ್ನಡ ನಾಮಫಲಕ ಅಳವಡಿಸಿದ್ದಾರೆ. ನೋಟಿಸ್ ನೀಡಿದ ಬಳಿಕವೂ 60% ನಿಯಮ ಅನುಸರಿಸದ 3,044 ಉದ್ದಿಮೆದಾರರು ಇದ್ದಾರೆ, ಅವರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.