ಬೆಂಗಳೂರು:ಡಿನ್ನರ್ ರಾಜಕೀಯ ಹೊಸದಲ್ಲ, ಎರಡೂವರೇ ವರ್ಷದಿಂದಲೂ ಇದೆ,ಬಣ, ಗುಂಪುಗಾರಿಕೆ ರಾಜಕೀಯ ನನ್ನ ರಕ್ತದಲ್ಲೇ ಇಲ್ಲ,ನಾನು ಯಾವ ಬಣದ ನೇತೃತ್ವವನ್ನೂ ವಹಿಸಿಲ್ಲ,ನಾನು 140 ಶಾಸಕರ ಅಧ್ಯಕ್ಷ, ಸಿಎಂ ಸಂಪುಟ ವಿಸ್ತರಣೆ ಮಾಡ್ತೀನಿ ಅಂದಿದ್ದಾರೆ ಹಾಗಾಗಿ ಸಚಿವ ಸ್ಥಾನದ ಅಕಾಂಕ್ಷಿಗಳು ದಿಲ್ಲಿಗೆ ಹೋಗಿದ್ದಾರೆ ಅಷ್ಟೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು,”ನನ್ನ ಬಳಿ ಯಾವ ಬಣವೂ ಇಲ್ಲ. ಯಾವುದೇ ಬಣದ ನಾಯಕನೂ ನಾನಲ್ಲ. 140 ಶಾಸಕರ ಅಧ್ಯಕ್ಷ ನಾನಾಗಿದ್ದು,140 ಶಾಸಕರೂ ನನಗೆ ಮುಖ್ಯ. “ಯಾವ ಗುಂಪನ್ನು ದೆಹಲಿಗೆ ಕರೆದುಕೊಂಡು ಹೋಗಲು ನನಗೆ ಇಚ್ಛೆ ಇಲ್ಲ. ನಾನು ಗುಂಪುಗಾರಿಕೆ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮಂತ್ರಿ ಸ್ಥಾನದ ಆಕಾಂಕ್ಷೆ ಇರುವವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗುವುದು ಸಹಜ ಎಂದು ಪ್ರಸ್ತುತ ವಿದ್ಯಮಾನಗಳ ಕುರಿತು ವಿವರಣೆ ನೀಡಿದರು.
ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಹಕ್ಕು ಶಾಸಕರು,ಸಚಿವರಿಗೆ ಇದೆ. ನಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ. ಕೆಲವರು ಮುಖ್ಯಮಂತ್ರಿಗಳ ಜೊತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರೆ, ಮತ್ತೆ ಕೆಲವರು ತಾವಾಗಿಯೇ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ? ನಾವು ಯಾರನ್ನೂ ತಡೆಯಲು ಸಾಧ್ಯವಿಲ್ಲ” ಎಂದು ನಾಯಕರ ದೆಹಲಿ ಪ್ರವಾಸಕ್ಕೆ ಸ್ಪಷ್ಟನೆ ನೀಡಿದರು.
ಸಿಎಂಗೆ ಆಲ್ ದಿ ಬೆಸ್ಟ್:
“ಒಂದು ಪಕ್ಷದ ಶಾಸಕರು ಮಂತ್ರಿ, ಮುಖ್ಯಮಂತ್ರಿ ಆಗಲು ಅರ್ಹರಿರುತ್ತಾರೆ. ಮುಖ್ಯಮಂತ್ರಿಗಳು ಐದು ವರ್ಷ ತಾವೇ ಸಿಎಂ ಆಗಿ ಇರುವುದಾಗಿ ಹೇಳಿದ್ದಾರೆ. ಐ ವಿಶ್ ಹಿಮ್ ಆಲ್ ದ ಬೆಸ್ಟ್ (ಅವರಿಗೆ ಶುಭ ಕೋರುತ್ತೇನೆ”). “ಸಿಎಂ ತಮ್ಮ ವಿಚಾರಧಾರೆ ಹೇಳಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನುಂಟು ಹೈಕಮಾಂಡ್ ಉಂಟು. ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಸಿಎಂ ಹೇಳಿದ್ದಾರೆ. ನಾನೂ ಹೇಳಿದ್ದೇನೆ. ಅದಕ್ಕೆ ನಾವು ಬದ್ಧ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎಂದರು.
ಎರಡೂವರೆ ವರ್ಷಗಳಿಂದ ಡಿನ್ನರ್ ಮೀಟಿಂಗ್ ಆಗುತ್ತಲೇ ಇವೆ:
ಸತೀಶ್ ಜಾರಕಿಹೊಳಿ ಅವರು ಡಿನ್ನರ್ ಸಭೆ ಮಾಡಿರುವ ಬಗ್ಗೆ ಕೇಳಿದಾಗ, “ನನಗೆ ಡಿನ್ನರ್ ಸಭೆಗಳ ಬಗ್ಗೆ ಗೊತ್ತಿಲ್ಲ. ನಾಲ್ಕೈದು ಡಿಸಿಎಂ ಮಾಡಬೇಕು, ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಎರಡೂವರೆ ವರ್ಷಗಳಿಂದ ಡಿನ್ನರ್ ಸಭೆಗಳನ್ನು ಮಾಡುತ್ತಲೇ ಇದ್ದಾರೆ. ಇನ್ನು ಹೆಚ್ಚು ಸಭೆಗಳನ್ನು ಮಾಡಲಿ” ಎಂದು ತಿಳಿಸಿದರು.

