ಮೈಸೂರು, ಏ.7: ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ನೀತಿ ಸಂಹಿತೆ ಉಲ್ಲಂಘಿಸದಂತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಎಂದು ವಿಶೇಷ ವೆಚ್ಚ ವೀಕ್ಷಕ ಬಿ ಮುರುಳಿ ಕುಮಾರ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ವೆಚ್ಚ ಸಮಿತಿಯ ಅಧಿಕಾರಿಗಳು ಹಾಗೂ ಸಮಿತಿಗಳ ನೋಡೆಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕು, ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾ ವಹಿಸಬೇಕು,ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ ದಾಖಲೆ ರಹಿತ ಹಣ ಅಥವಾ ಇನ್ನಿತರೆ ವಸ್ತುಗಳು ಸಾಗಾಣಿಕೆಯಾಗದಂತೆ ನೋಡಿಕೊಳ್ಳಿ ಎಂದು ಆದೇಶಿಸಿದರು.
ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ವಿ.ಟಿ ಹಾಗೂ ಇನ್ನಿತರೆ ತಂಡಗಳು ಜವಾಬ್ದಾರಿಯುತವಾಗಿ ಕೆಲಸ ನಡೆಸಿ ಅಭ್ಯರ್ಥಿಯು ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು.
ಚುನಾವಣಾ ಅವಧಿಯಲ್ಲಿ ಎಲ್ಲ ಬ್ಯಾಂಕುಗಳ ಮೂಲಕ ನಡೆಯಬಹುದಾದ ಅನುಮಾನಾಸ್ಪದ ವ್ಯವಹಾರಗಳು, ಹಣ ಪಡೆಯುವ ಬಗ್ಗೆ ಬ್ಯಾಂಕುಗಳು ಪ್ರತಿನಿತ್ಯ ಮಾಹಿತಿ ಒದಗಿಸಬೇಕು ಎಂದು ಮುರುಳಿ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಜಿಲ್ಲೆಯಲ್ಲಿ ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ವಿವಿಧ ತಂಡಗಳು, ಅಧಿಕಾರಿಗಳು, ಸ್ಥಾಪನೆಯಾಗಿರುವ ಚೆಕ್ ಪೋಸ್ಟ್ ಗಳು ಮತ್ತಿತರ ಮಾಹಿತಿಗಳನ್ನು ನೀಡಿದರು.
ಸಭೆಯಲ್ಲಿ ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಎ. ಸುರೇಶ್, ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.