ಮೈಸೂರು,ಮೇ.22: ಸೈನಿಕರು ಹಾಗೂ ರೈತರ ತ್ಯಾಗಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳಿದರು.
ನಗರದ ಬೆಳವಾಡಿಯಲ್ಲಿ ಸೈನಿಕ ಅಕಾಡೆಮಿ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಸೈನಿಕ ತರಬೇತಿ ರಕ್ಷಣಾ ಇಲಾಖೆಗೆ ತರಬೇತಿಗಾಗಿ ಬಂದ ಮಕ್ಕಳಿಗೆ ಉಚಿತ ರಕ್ತ ಪರೀಕ್ಷೆ ಮಾಡಿ ನಂತರ ರಕ್ತ ಗುಂಪಿನ ಗುರುತಿನ ಚೀಟಿಯನ್ನು ವಿತರಿಸಿ ಮಾತನಾಡಿದರು.
ರೈತರು ಮತ್ತು ಸೈನಿಕರು ಎರಡು ಕಣ್ಣುಗಳಿದ್ದಂತೆ ಅವರನ್ನು ಕಡೆಗಾಣಿಸಲಾಗದು. ಪ್ರಾಣ ಪಣಕ್ಕಿಟ್ಟು ನಮ್ಮನ್ನು ಕಾಯುವವನು ಸೈನಿಕನಾದರೆ, ಹೊಟ್ಟೆ ತುಂಬಿಸುವ ಕಾರ್ಯವನ್ನು ರೈತ ಮಾಡುತ್ತಾನೆ ಎಂದು ಶ್ಲಾಘಿಸಿದರು.
ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಹುತ್ಮಾತರನ್ನು ಗುರುತಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಮಾಧ್ಯಮಗಳು ಸಮಾಜದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಕಾರಣ ದೇಶಪ್ರೇಮಿಗಳನ್ನು ಬೆಳಕಿಗೆ ತರುವ, ಅವರಿಗೆ ಸೂಕ್ತ ಗೌರವ ಸಿಗುವಂತೆ ಮಾಡುವಲ್ಲಿ ಮಾಧ್ಯಮಗಳು ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಸೈನಿಕ ಅಕಾಡೆಮಿ ಮೈಸೂರು ಸಂಸ್ಥಾಪಕರು ಹಾಗೂ ಮಾಜಿ ಕಮಾಂಡೋ ಶ್ರೀಧರ್ ಸಿ ಎಂ ಮಾತನಾಡಿ,ದೇಶದ ಉಳಿವಿಗಾಗಿ ಸಾವಿರಾರು ಯೋಧರು ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ. ಅವರನ್ನು ನೆನೆಯುವುದು ಆತಿ ಮುಖ್ಯ ಎಂದು ತಿಳಿಸಿದರು.
ಪೋಷಕರು ತಮ್ಮ ಮಕ್ಕಳನ್ನು ಯೋಧರನ್ನಾಗಿಸಲು ಪಣ ತೊಡಬೇಕು, ಈ ಮೂಲಕವಾದರೂ ದೇಶಸೇವೆ ಮಾಡುವ ಭಾಗ್ಯ ಸಿಕ್ಕಿತಲ್ಲ ಎಂಬ ಧನ್ಯತೆ ಕಾಣಬೇಕು ಎಂದು ನುಡಿದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ,ಪ್ರತಿಯೊಬ್ಬರೂ ರಕ್ತದ ಗುಂಪನ್ನು ತಿಳಿದುಕೊಳ್ಳುವುದರಿಂದ ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ರಕ್ತ ಪಡೆಯಲು ಹಾಗೂ ದಾನ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬೈರತಿ ಲಿಂಗರಾಜು, ರವಿಚಂದ್ರ, ಅನಿತಾ ಶ್ರೀಧರ್, ಅಧ್ಯಾಪಕರಾದ ರಘು ಹಾಗೂ ಅಭ್ಯರ್ಥಿಗಳು ಹಾಜರಿದ್ದರು.