ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವೆ ಏರ್ಪಟ್ಟಿರುವ ನೂತನ ವ್ಯಾಪಾರ ಒಪ್ಪಂದವು ಭಾರತೀಯ ರೈತರ ಪಾಲಿಗೆ ವರದಾನವಾಗಲಿದೆಯೇ ಹೊರತು, ಅವರಿಗಾಗುವ ಯಾವುದೇ ಹಾನಿಯನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸ್ಪಷ್ಟಪಡಿಸಿದ್ದಾರೆ
ಅಂತರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮಾತನಾಡಿದ ಅವರು,ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಆತಂಕಪಡಬೇಕಿಲ್ಲ, ಪ್ರಧಾನಿ ನರೇಂದ್ರ ಮೋದಿಯವರು ರೈತರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದರು. ಈ ಒಪ್ಪಂದವು ಕೃಷಿ ಮತ್ತು ಡೈರಿ ಕ್ಷೇತ್ರಕ್ಕೆ ಸಂಪೂರ್ಣ ರಕ್ಷಣೆ ನೀಡುತ್ತದೆ ಎಂದು ಅವರು ಪ್ರತಿಪಾದಿಸಿದರು.
ಅಮೆರಿಕವು ಭಾರತೀಯ ಕೃಷಿ ರಫ್ತಿನ ಮೇಲಿನ ಆಮದು ಸುಂಕವನ್ನು ಶೇ. 50 ರಿಂದ ಶೂನ್ಯಕ್ಕೆ ಇಳಿಸಿದೆ. ಇದರಿಂದ ಭಾರತೀಯ ರೈತರು ಬೆಳೆದ ಉತ್ಪನ್ನಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಲಿದ್ದು, ರೈತರ ಆದಾಯ ಹೆಚ್ಚಲಿದೆ.ಆದರೆ ವಿರೋಧ ಪಕ್ಷಗಳು ಈ ಒಪ್ಪಂದದ ಬಗ್ಗೆ ಇಲ್ಲದ ಆತಂಕವನ್ನು ಸೃಷ್ಟಿಸುತ್ತಿವೆ. ದಶಕಗಳ ಕಾಲ ಆಡಳಿತ ನಡೆಸಿದರೂ ಕಾಂಗ್ರೆಸ್ ಸರ್ಕಾರ ರೈತರನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಲು ವಿಫಲವಾಗಿತ್ತು ಎಂದು ಸಚಿವರು ಟೀಕಿಸಿದರು.
ಆಮದು ನಿರ್ಬಂಧ ಮತ್ತು ರಕ್ಷಣೆ: ಗೋಧಿ, ಅಕ್ಕಿ, ಮಕ್ಕೆಜೋಳ, ಸೋಯಾಬೀನ್, ಕುಕ್ಕುಟ ಉತ್ಪನ್ನಗಳು, ಹಾಲು ಮತ್ತು ಚೀಸ್ ನಂತಹ ಪ್ರಮುಖ ಉತ್ಪನ್ನಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು. ವಿದೇಶಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಹಠಾತ್ತನೆ ಲಗ್ಗೆ ಇಡಲು ಅವಕಾಶ ನೀಡುವುದಿಲ್ಲ ಎಂದರು.
ರಫ್ತು ಅವಕಾಶಗಳ ಹೆಚ್ಚಳ: ಅಮೆರಿಕವು ಭಾರತೀಯ ಕೃಷಿ ರಫ್ತಿನ ಮೇಲಿನ ಸುಂಕವನ್ನು ಗಣನೀಯವಾಗಿ ಇಳಿಸಿರುವುದರಿಂದ, ಭಾರತದ ಬಾಸ್ಮತಿ ಅಕ್ಕಿ, ಮಸಾಲೆಗಳು ಮತ್ತು ಜವಳಿ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಬರಲಿದೆ. ಇದು ನೇರವಾಗಿ ಹತ್ತಿ ಬೆಳೆಯುವ ರೈತರಿಗೂ ಲಾಭ ತರಲಿದೆ. ಬೇಳೆಕಾಳುಗಳ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸುಧಾರಿತ ಬೀಜಗಳು, ಬೇಗನೆ ಫಸಲು ನೀಡುವ ತಳಿಗಳು ಮತ್ತು ರೋಗಮುಕ್ತ ಬೆಳೆಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ಸೂಚಿಸಲಾಗಿದೆ ಎಂದರು.
ಸಮಗ್ರ ಕೃಷಿ ಪದ್ಧತಿ (Integrated Farming): ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳ ಮೇಲೆ ಅವಲಂಬಿತರಾಗದೆ, ತರಕಾರಿ, ಹೂವು, ಹಣ್ಣು, ಔಷಧೀಯ ಸಸ್ಯಗಳು ಮತ್ತು ಪಶುಸಂಗೋಪನೆಯನ್ನು ಒಳಗೊಂಡ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮಿತಿ ಹೆಚ್ಚಳ: ಹಣ್ಣು ಮತ್ತು ತರಕಾರಿ ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯುವ ನಾಯಕತ್ವ: ಕೃಷಿ ಕ್ಷೇತ್ರದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ‘ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್’ ನಂತಹ ವೇದಿಕೆಗಳ ಮೂಲಕ ನವೀನ ಆಲೋಚನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.

