ಮೈಸೂರು, ಮಾ. 23: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಅಕ್ರಮ ಸಕ್ರಮ ಯೋಜನೆ ಮರು ಜಾರಿಗೆ ಒತ್ತಾಯಿಸಿ ಮಾ. 26 ರಂದು ರೈತ ಸಂಘಟನೆಗಳು ಹೋರಾಟ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ,
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರೈತರು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.
ಕೃಷಿ ಪಂಪ್ ಸೆಟ್ ಗಳಿಗೆ 10 ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು, ಕಳೆದ ಸಾಲಿನಲ್ಲಿ ಇದ್ದಂತೆ ಅಕ್ರಮ ಸಕ್ರಮವನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಅವಘಡಗಳಿಂದ ಮರಣ ಹೊಂದಿದ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ರೈತರು ಬೆಳೆದಂತಹ ಕಬ್ಬಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ನಷ್ಟಕ್ಕೆ 30 ದಿನದ ಒಳಗೆ ನಷ್ಟ ಪರಿಹಾರ ನೀಡಬೇಕು ರಾಜ್ಯ ಸರ್ಕಾರ ಚುನಾವಣೆಯ ಪ್ರಣಾಳಿಕೆಯ ಭರವಸೆಯಂತೆ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಮೋದಿಯವರು ಉಚಿತವಾಗಿ ಶ್ರೀಲಂಕಾ ಪಾಕಿಸ್ತಾನ ಮತ್ತು ಪ್ರವಾಹ ಪೀಡಿತ ರಾಷ್ಟ್ರಗಳಿಗೆ ಹಂಚುತ್ತಾರೆ, ಕೃಷಿಗೆ ಮೂಲ ಸೌಕರ್ಯ ವಾದ ವಿದ್ಯುತ್ ನೀಡುವಲ್ಲಿ ರಾಜ್ಯ,ಕೇಂದ್ರ ಸರ್ಕಾರಗಳು ನಾಟಕವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಕೆರೆ ಹುಂಡಿ ರಾಜಣ್ಣ, ಮೈಸೂರು ಜಿಲ್ಲಾ ಗೌರವಾಧ್ಯಕ್ಷ ಶಿವರುದ್ರಪ್ಪ, ಜಿಲ್ಲಾಧ್ಯಕ್ಷ ಹಾಡ್ಯ ರವಿ, ಸಂಘಟನಾ ಕಾರ್ಯದರ್ಶಿ ಕೊಂತಯ್ಯನ ಹುಂಡಿ ಮಹೇಶ, ಚಾಮರಾಜನಗರ ತಾಲೂಕ ಅಧ್ಯಕ್ಷ ಅರಳಿಕಟ್ಟೆ ಕುಮಾರ್, ನರಸೀಪುರ ತಾಲೂಕ ಅಧ್ಯಕ್ಷ ಸುಜ್ಜಲೂರು ಜಯ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.