ಮೈಸೂರು, ಫೆ.19:ನಿವೇಶನಗಳ ಖಾತೆ ಮಾಡುವ ವೇಳೆ ನಿಯಮ ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಇಬ್ಬರು ಅಧಿಕಾರಿಗಳ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
ಸರ್ಕಾರಿ ದಾಖಲೆಗಳನ್ನ ತಿದ್ದಿ ಕೆಲವು ಕಡತಗಳನ್ನ ನಾಪತ್ತೆ ಮಾಡಿ ನಿವೇಶನಗಳ ಖಾತೆ ಮಾಡುವ ವೇಳೆ ನಿಯಮ ಉಲ್ಲಂಘಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಹಿನ್ನೆಲೆಯಲ್ಲಿ
ಇಬ್ಬರು ಅಧಿಕಾರಿಗಳ ವಿರುದ್ದ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.
ನಗರಸಭೆ ಹಿಂದಿನ ಪೌರಾಯುಕ್ತರಾದ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕ ಡಿ.ಎನ್.ನರಸಿಂಹಮೂರ್ತಿ ವಿರುದ್ಧ ಹಾಲಿ ಪೌರಾಯುಕ್ತ ನಂಜುಂಡಸ್ವಾಮಿ ಎಫ್ ಐ ಆರ್ ದಾಖಲಿಸಿದ್ದಾರೆ.
ನಂಜನಗೂಡು ತಾಲೂಕು ದೇಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವೀರಮ್ಮನಹಳ್ಳಿ ಸರ್ವೆ ನಂ 58,59 ರ ವಿಸ್ತೀರ್ಣ3.16 ಬಿ.ಬಸ್ಸಪ್ಪ ಎಂಬುವರಿಗೆ ಸೇರಿದ್ದು ಕೈಗಾರಿಕಾ ಉದ್ದೇಶಕ್ಕಾಗಿ ಉಪವಿಭಾಗಾಧಿಕಾರಿಗಳು ಅನ್ಯಕ್ರಾಂತ ಮಂಜೂರು ಮಾಡಿದ್ದಾರೆ.
ನಂತರ ವಸತಿ ಬಡಾವಣೆ ನಿರ್ಮಿಸಲು ಬದಲಾವಣೆಗೆ ಸಹ ಆದೇಶ ಮಾಡಿದ್ದಾರೆ.
ವಸತಿ ಮನೆ ನಿರ್ಮಿಸಬೇಕಿದ್ದಲ್ಲಿ ಮೈಸೂರು-ನಂಜನಗೂಡು ಯೋಜನಾ ಪ್ರಾಧಿಕಾರದಿಂದ ಅಧಿಕೃತ ಬಡಾವಣೆ ನಕ್ಷೆ ಅನುಮೋದನೆ ಪಡೆಯಬೇಕಿತ್ತು.
ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಆಗಿಲ್ಲ.ಹಿಂದಿನ ಪೌರಾಯುಕ್ತರಾದ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕರಾದ ಡಿ.ಎನ್.ನರಸಿಂಹಮೂರ್ತಿ ಸಂಖ್ಯೆ 106ರ ಆಸ್ತಿ, ನಿವೇಶನ ಸಂಖ್ಯೆ 1 ರಿಂದ 48 ರವರೆಗೆ ವಿವಿದ ಅಸೆಸ್ ಮೆಂಟ್ ಗಳಲ್ಲಿ ವಿವಿದ ಅಳತೆಗಳನ್ನ ನಮೂದಿಸಿ ಗಂಗಮ್ಮ ಎಂಬುವರ ಹೆಸರಿಗೆ ಖಾತೆ ದಾಖಲಿಸಿದ್ದಾರೆ.
ಇದರಲ್ಲಿ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವ ವೇಳೆ ಕೆಲವೆಡೆ ಹೆಸರುಗಳನ್ನ ಖಾಲಿ ಬಿಡಲಾಗಿದೆ.ಕೆಲವೆಡೆ ತಿದ್ದಿ ಬರೆದಿದ್ದಾರೆ.ಮತ್ತೆ ಕೆಲವು ಕಡತಗಳೇ ನಾಪತ್ತೆಯಾಗಿದೆ.
ಆದ್ದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಹಿಂದಿನ ಪೌರಾಯುಕ್ತರಾದ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕ ಡಿ.ಎನ್.ನರಸಿಂಹಮೂರ್ತಿ ವಿರುದ್ದ ಹಾಲಿ ಪೌರಾಯುಕ್ತರಾದ ನಂಜುಂಡಸ್ವಾಮಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.