Mon. Dec 23rd, 2024

ಪ್ರವಾಹ ಹಾನಿ;ತಕ್ಷಣ 5,000 ಕೋಟಿ ಬಿಡುಗಡೆ ಮಾಡಿ:ಅಶೋಕ ಒತ್ತಾಯ

Share this with Friends

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಹಾನಿ ಉಂಟಾಗಿದ್ದು, ಸರ್ಕಾರ ಕೂಡಲೇ ಸಭೆ ಕರೆದು 5,000 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

ಸಿಲ್ಕ್‌ ಬೋರ್ಡ್‌ ವೃತ್ತದ ಬಳಿ ಮಳೆ ಹಾನಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ 1,000 ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಹೇಳಿದರು.

ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ. ಮಲೆನಾಡಿನಲ್ಲಿ ಕಾಫಿ ಉದುರುತ್ತಿದೆ, ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ, ಈರುಳ್ಳಿ ಕೊಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಭಕರ್ಣನಂತೆ ನಿದ್ದೆ ಮಾಡುವುದನ್ನು ಬಿಟ್ಟು ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅನಾಹುತ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಒಂದು ತಿಂಗಳಿಂದ ಪ್ರವಾಹ ಸಂಬಂಧ ಸಭೆಯೇ ನಡೆದಿಲ್ಲ. ಸರ್ಕಾರ ಕೂಡಲೇ ಸಭೆ ಕರೆದು ಕನಿಷ್ಠ 5,000 ಕೋಟಿ ಹಾಗೂ ಬೆಂಗಳೂರಿಗೆ ವಿಶೇಷವಾಗಿ 1,000 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

16 ತಿಂಗಳ ಕಾಂಗ್ರೆಸ್‌ ಸರ್ಕಾರದ ಪಾಪದ ಫಲವನ್ನು ಬೆಂಗಳೂರಿನ ಜನರು ಅನುಭವಿಸಬೇಕಾಗಿದೆ. ರಾಜಕಾಲುವೆಯ ಹೂಳು ತೆಗೆದು ಸ್ವಚ್ಛ ಮಾಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇದರಿಂದಾಗಿ ತೇಲುತ್ತಿರುವ ಬೆಂಗಳೂರು ಎಂಬ ಅಪಖ್ಯಾತಿ ನಗರಕ್ಕೆ ಬಂದಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಒಂದೂವರೆ ವರ್ಷದಲ್ಲಿ ಎಷ್ಟು ಒತ್ತುವರಿ ತೆರವು ಮಾಡಿದ್ದಾರೆ, ಎಷ್ಟು ಹೂಳು ತೆಗೆಸಿದ್ದಾರೆ ಎಂದು ತಿಳಿಸಲಿ ಎಂದು ಸವಾಲು ಹಾಕಿದರು.

ಬೆಂಗಳೂರಿನಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಖಜಾನೆ ಖಾಲಿಯಾಗಿದೆ ಎಂದು ನಮಗೂ ಗೊತ್ತಿದೆ. ಆದ್ದರಿಂದ ಕನಿಷ್ಠ 500 ಕೋಟಿ ರೂ. ಹಣವಾದರೂ ಬಿಡುಗಡೆ ಮಾಡಲಿ. ಇಲ್ಲವೆಂದರೆ ಗುತ್ತಿಗೆದಾರರು ಮುಂದೆ ಬರುವುದಿಲ್ಲ ಎಂದು ಹೇಳಿದರು.

ಮಾನ್ಯತಾ ಟೆಕ್‌ ಪಾರ್ಕ್‌ ಈಗ ಮುಳುಗಡೆ ಆದಂತಾಗಿದೆ ಸಿಲ್ಕ್‌ ಬೋರ್ಡ್‌ನಲ್ಲಿ ಪ್ರತಿ ದಿನವೂ ಪ್ರವಾಹ ಉಂಟಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ 6 ತಿಂಗಳಾದರೂ ಏನೂ ಮಾಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಾತ್ರಿ ಪರಿಶೀಲನೆ ಮಾಡಿದ್ದು, ಅವರಿಗೆ ಯಾವುದೇ ಸಮಸ್ಯೆ ಕಾಣಿಸಿಯೇ ಇಲ್ಲ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ ಉಪಚುನಾವಣೆಗೆ ಅಭ್ಯರ್ಥಿಯನ್ನು ಎನ್‌ಡಿಎ ಆಯ್ಕೆ ಮಾಡಲಿದೆ. ಈ ಬಗ್ಗೆ ಚರ್ಚೆ ನಡೆದು ಶೀಘ್ರ ಅಂತಿಮ ತೀರ್ಮಾನವಾಗಲಿದೆ ಎಂದು ‌ಸ್ಪಷ್ಟಪಡಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಬಗ್ಗೆ ಸಚಿವ ಭೈರತಿ ಸುರೇಶ್‌ ಕೀಳಾಗಿ ಮಾತಾಡಿರುವುದು ಸರಿಯಲ್ಲ ಎಂದು ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


Share this with Friends

Related Post