Thu. Mar 12th, 2026

‘ಅಸ್ಸಾಂ ಚುನಾವಣೆ ಗೆಲ್ಲಲು ಕರ್ನಾಟಕ ಮಾದರಿ ಅನುಸರಿಸಿ’: ಎಐ ಉತ್ತರಿಸಿದ ಕುರಿತು ಡಿಕೆಶಿ ಕುತೂಹಲಕಾರಿ ಹೇಳಿಕೆ

Share this with Friends

ಬೆಂಗಳೂರು: ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ ಕುರಿತು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಂಚಿಕೊಂಡ ಒಂದು ಸ್ವಾರಸ್ಯಕರ ಪ್ರಸಂಗ ಗಮನ ಸೆಳೆದಿದೆ. ಅಸ್ಸಾಂ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎಂದು ಎಐ ಅನ್ನು ಪ್ರಶ್ನಿಸಿದಾಗ, ಅದು ‘ಕರ್ನಾಟಕ ಮಾದರಿ’ಯನ್ನು ಅನುಸರಿಸಲು ಸೂಚಿಸಿತು ಎಂದು ಅವರು ಸದನದಲ್ಲಿ ತಿಳಿಸಿದರು.

ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು ರಾಜ್ಯದಲ್ಲಿ ಆಡಳಿತ ಸುಧಾರಣೆಗಾಗಿ ಎಐ ಬಳಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನಾವು ಎಐ ಯುಗಕ್ಕೆ ಕಾಲಿಡುತ್ತಿದ್ದೇವೆ ಎಂಬುವುದನ್ನು ಒಪ್ಪಿಕೊಂಡರು. “ನಾನು ಅಸ್ಸಾಂಗೆ ಹೋದಾಗ ಅಲ್ಲಿನ ಚುನಾವಣೆ ಗೆಲ್ಲುವ ಬಗ್ಗೆ ಎಐ ಬಳಿ ಕೇಳಿದೆ. ಆಗ ಅದು ಕರ್ನಾಟಕದ ಮಾದರಿಯನ್ನು ಅನುಸರಿಸಿದರೆ ಅಸ್ಸಾಂನಲ್ಲಿ ಗೆಲುವು ಸಾಧ್ಯ ಎಂದು ಉತ್ತರ ನೀಡಿತು” ಎಂದು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.

ಸಂಶೋಧನೆ ಅಗತ್ಯ:

ಆಡಳಿತದಲ್ಲಿ ಎಐ ಬಳಕೆಯ ಬಗ್ಗೆ ಎಚ್ಚರಿಕೆಯ ಹೆಜ್ಜೆಯನ್ನಿಟ್ಟ ಡಿಸಿಎಂ, “ಎಐನಲ್ಲಿ ನಾವು ಏನನ್ನು ಇನ್ಪುಟ್ ನೀಡುತ್ತೇವೆಯೋ ಅದೇ ಮಾಹಿತಿ ನಮಗೆ ಹೊರಬರುತ್ತದೆ. ಹೊಸದಾಗಿ ಏನನ್ನೂ ಸೃಷ್ಟಿಸಲು ಅದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಆಡಳಿತದಲ್ಲಿ ಇದನ್ನು ಅಳವಡಿಸಿಕೊಳ್ಳುವ ಮೊದಲು ಆಳವಾದ ಸಂಶೋಧನೆ ಅಗತ್ಯ” ಎಂದು ಅಭಿಪ್ರಾಯಪಟ್ಟರು.

ನಿಖರತೆಯ ಕೊರತೆ:

ಭಾಷಣ ಮತ್ತು ಮಾಹಿತಿ ಸಂಗ್ರಹಕ್ಕಾಗಿ ತಾವೂ ಚಾಟ್ ಜಿಪಿಟಿ ಬಳಸಿದ್ದಾಗಿ ತಿಳಿಸಿದ ಅವರು, ಮಾಹಿತಿ ಸಿಗುತ್ತದೆಯಾದರೂ ಅದರ ನಿಖರತೆ ಇನ್ನೂ ಸುಧಾರಿಸಬೇಕಿದೆ ಎಂದರು. “ಕೋರ್ಟ್ ತೀರ್ಪುಗಳು ಅಥವಾ ಸದನದ ದಾಖಲೆಗಳನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡದ ಹೊರತು ಎಐನಿಂದ ನಿಖರ ಮಾಹಿತಿ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಕೇವಲ ಈ ಮಾಹಿತಿಯನ್ನೇ ಆಧರಿಸಿ ತೀರ್ಪು ನೀಡಲು ಅಥವಾ ಆಡಳಿತ ನಡೆಸಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನ ಮಂತ್ರಿಗಳ ಸಮ್ಮೇಳನ, ಸಿಬಿಎಸ್‌ಇ ಪಠ್ಯದಲ್ಲಿ ಎಐ ಸೇರ್ಪಡೆ ಹಾಗೂ ನ್ಯಾಯಾಲಯಗಳಲ್ಲಿನ ಚರ್ಚೆಗಳನ್ನು ಉಲ್ಲೇಖಿಸಿದ ಅವರು, ತಂತ್ರಜ್ಞಾನದ ಅಳವಡಿಕೆಯ ಸಾಧಕ-ಬಾಧಕಗಳ ಬಗ್ಗೆ ಸಂಶೋಧನೆ ನಡೆಯಬೇಕು ಎಂದು ತಿಳಿಸಿದರು

ನಗರದಾದ್ಯಂತ 441 ಹೊಸ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ:

ಸಿಲಿಕಾನ್ ಸಿಟಿಯ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಹೊಸದಾಗಿ 441 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಆರತಿ ಕೃಷ್ಣ ಅವರು ಸಾರ್ವಜನಿಕ ಶೌಚಾಲಯಗಳ ದುಸ್ಥಿತಿ ಹಾಗೂ ಸ್ವಚ್ಛತೆ ಕಾಪಾಡಲು ಎಐ (AI) ತಂತ್ರಜ್ಞಾನ ಬಳಸುವ ಬಗ್ಗೆ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರಿಸಿದರು.

ಬ್ರಾಂಡ್ ಬೆಂಗಳೂರು ಅಡಿ ಮಹಿಳೆಯರಿಗೆ ಆದ್ಯತೆ:

“ನಗರದಲ್ಲಿ ಪ್ರಸ್ತುತ 388 ಹಳೆಯ ಶೌಚಾಲಯಗಳಿದ್ದು, ಇವುಗಳ ಜೊತೆಗೆ ಬೃಹತ್ ಪ್ರಮಾಣದಲ್ಲಿ ಹೊಸ ಶೌಚಾಲಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವಿಶೇಷವಾಗಿ ‘ಬ್ರಾಂಡ್ ಬೆಂಗಳೂರು’ ಯೋಜನೆಯಡಿ ಮಹಿಳೆಯರಿಗಾಗಿಯೇ ಪ್ರತ್ಯೇಕ 100 ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ,” ಎಂದು ಅವರು ವಿವರಿಸಿದರು.

ಅನುದಾನ ಮತ್ತು ಹಂಚಿಕೆ ವಿವರ:

ಶೌಚಾಲಯಗಳ ನಿರ್ಮಾಣದ ಕುರಿತು ಅಂಕಿಅಂಶ ನೀಡಿದ ಡಿ.ಕೆ. ಶಿವಕುಮಾರ್:

ಸ್ವಚ್ಛ ಭಾರತ ಮಿಷನ್: ಕೇಂದ್ರ ಸರ್ಕಾರದ 13.5 ಕೋಟಿ ರೂ. ಅನುದಾನದಲ್ಲಿ 90 ಶೌಚಾಲಯಗಳು.

ಶುಭ್ರ ಬೆಂಗಳೂರು ಯೋಜನೆ: 60 ಶೌಚಾಲಯಗಳ ನಿರ್ಮಾಣ.

ಹೊಸ ಯೋಜನೆಗಳು: ವಿವಿಧ ಯೋಜನೆಗಳಡಿ ಒಟ್ಟು 191 ಶೌಚಾಲಯಗಳು ನಿರ್ಮಾಣದ ಹಂತದಲ್ಲಿವೆ.

ನಿರ್ವಹಣೆಯಲ್ಲಿ ಮಾನವೀಯ ಸ್ಪರ್ಶ:

ಅಸ್ತಿತ್ವದಲ್ಲಿರುವ ಶೌಚಾಲಯಗಳ ಪೈಕಿ 65 ಶೌಚಾಲಯಗಳನ್ನು ನಿವೃತ್ತ ಪೌರಕಾರ್ಮಿಕರಿಗೆ ಹಾಗೂ 20 ಶೌಚಾಲಯಗಳನ್ನು ವಿಶೇಷ ಚೇತನರಿಗೆ ನಿರ್ವಹಣೆಗಾಗಿ ನೀಡುವ ಮೂಲಕ ಅವರಿಗೆ ಜೀವನೋಪಾಯ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಾರ್ವಜನಿಕರು ಅಥವಾ ಸದಸ್ಯರು ಯಾವುದಾದರೂ ನಿರ್ದಿಷ್ಟ ಜನದಟ್ಟಣೆಯ ಪ್ರದೇಶಗಳಲ್ಲಿ ಶೌಚಾಲಯದ ಅಗತ್ಯವಿದೆ ಎಂದು ಗುರುತಿಸಿದರೆ, ಅಲ್ಲಿ ಜಾಗದ ಲಭ್ಯತೆ ನೋಡಿಕೊಂಡು ಹೊಸ ಶೌಚಾಲಯ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.


Share this with Friends

Related Post