ಮೈಸೂರು,ಫೆ.23: ಸಾಲದ ಹಣ ವಾಪಸು ನೀಡುವಂತೆ ಒತ್ತಾಯಿಸಿದ್ದಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ
ಲ್ಲಿ ನಡೆದಿದೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಶಹನಾ ಶರೀನ್ (25)ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಹಣಕ್ಕಾಗಿ ಪೀಡಿಸಿದ ಸಂಘ ಸಂಸ್ಥೆಯೊಂದರ ಪ್ರಮುಖರಾದ ಫರ್ಜಾನಾ,ನಾಜಿಯಾ ಹಾಗೂ ಮುಬಾರಕ್ ಎಂಬವರನ್ನು ಮಂಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಶೋಕಾ ರಸ್ತೆ ನಿಜಾಮಿಯಾ ಸ್ಕೂಲ್ ಹಿಂಬಾಗದ ಮನೆಯೊಂದರಲ್ಲಿ ವಾಸವಿದ್ದ ಶಹನಾ ಶಿರೀನ್ ಮೂರು ಸಂಘ ಸಂಸ್ಥೆಯೊಂದರಲ್ಲಿ ಸದಸ್ಯರಾಗಿದ್ದರು.
ಪತಿಗೆ ಗೂಡ್ಸ್ ವಾಹನ ಕೊಡಿಸಲು ಮೂರು ಸಂಘಗಳಿಂದ ಶರೀನ್ ತಲಾ 50 ಸಾವಿರ ರೂ ಸಾಲ ಪಡೆದಿದ್ದರು.ಮೂರು ತಿಂಗಳ ಹಿಂದೆ ಪಡೆದ ಸಾಲಕ್ಕೆ ಆಗಲೇ 50 ಸಾವಿರ ಬಡ್ಡಿ ಕಟ್ಟಿದ್ದರು.
ಆದರೂ ಸಾಲದ ಹಣ ಹಿಂದಿರುಗಿಸುವಂತೆ ಫರ್ಜಾನಾ,ನಾಜಿಯಾ,ಮುಬಾರಕ್ ಕಿರುಕುಳ ನೀಡುತ್ತಿದ್ದರು.ಎರಡು ದಿನಗಳ ಹಿಂದೆ ಮನೆಗೆ ಬಂದು ಶಹನಾ ಶಿರೀನ್ ಬಳಿ ಇದ್ದ ಮೊಬೈಲ್ ಸಹ ಕಿತ್ತುಕೊಂಡು ಹೋಗಿದ್ದರಲ್ಲದೆ ಅಸಲು ಹಾಗೂ ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು.
ಇದರಿಂದ ಬೇಸತ್ತ ಶಹನಾ ಶಿರೀನ್ ಪತಿ ಅಯೂಬ್ ಖಾನ್ ಗೆ ಫೋನ್ ಮಾಡಿ ಬೇಗ ಮನೆಗೆ ಬರುವಂತೆ ತಿಳಿಸಿದ್ದಾರೆ.ಪತಿ ಅಯೂಬ್ ಖಾನ್ ಮನೆಗೆ ತಲುಪುವಷ್ಟರಲ್ಲಿ ಶಹನಾ ಶಿರೀನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿಯ ಸಾವಿಗೆ ಮೂವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಪತಿ ಅಯೂಬ್ ಖಾನ್ ಆರೋಪಿಸಿದ್ದು,ತಮಗೆ ನ್ಯಾಯ ಒದಗಿಸುವಂತೆ ಕೋರಿದ್ದಾರೆ.
ಅಯೂಬ್ ಖಾನ್ ನೀಡಿದ ದೂರಿನ ಮೇರೆಗೆ ಮಂಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಅಲ್ಲದೆ ಸಾಲಕ್ಕಾಗಿ ಕಿರುಕುಳ ನೀಡಿದ ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.