ಮಂಗಳೂರು: “ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಲು ಮಾರ್ಚ್ ತಿಂಗಳಲ್ಲಿ ಏಕಕಾಲಕ್ಕೆ ನೂರು ಪಕ್ಷದ ಕಚೇರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು,” ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,”ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರೈಸಲಿದ್ದೇನೆ. ಈ ಮೈಲಿಗಲ್ಲಿನ ನೆನಪಿಗಾಗಿ ರಾಜ್ಯದ ವಿವಿಧೆಡೆ ಪಕ್ಷದ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲಾಗುವುದು. ಎಐಸಿಸಿಯಿಂದ ದಿನಾಂಕ ನಿಗದಿಯಾಗಲಿ ಅಥವಾ ಬಿಡಲಿ, ನಾನಂತೂ ಸಿದ್ಧತೆ ಮಾಡಿಕೊಂಡು ಶಂಕುಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡುತ್ತೇನೆ,” ಎಂದು ಅವರು ಸಿದ್ಧತೆಯನ್ನು ಖಚಿತಪಡಿಸಿದರು.
ಧರ್ಮ ರಾಜಕಾರಣದ ಆರೋಪಕ್ಕೆ ತಿರುಗೇಟು:
ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸ್ಲಿಂ ಮುಖಂಡರನ್ನು ಆಹ್ವಾನಿಸಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಕಾಂಗ್ರೆಸ್ ಪಕ್ಷವು ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲಾ ಧರ್ಮ, ಜಾತಿಯವರು ಸಮಾನರು. ರಾಜಕೀಯದಲ್ಲಿ ಧರ್ಮ ಇರಬೇಕು, ಆದರೆ ಧರ್ಮದಲ್ಲಿ ರಾಜಕಾರಣ ಬೆರೆಯಬಾರದು ಎನ್ನುವುದು ನಮ್ಮ ಸಿದ್ಧಾಂತ. ಅಸೂಯೆ ಇರುವವರು ಇಂತಹ ಅಪಪ್ರಚಾರ ಮಾಡುತ್ತಾರೆ,” ಎಂದು ಸ್ಪಷ್ಟಪಡಿಸಿದರು.
ಸಿಎಂ ಸ್ಥಾನದ ಊಹಾಪೋಹ: “ಅವರೇ ನಮ್ಮ ಹೈಕಮಾಂಡ್”
ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ವ್ಯಂಗ್ಯವಾಗಿಯೇ ಉತ್ತರಿಸಿದ ಡಿಸಿಎಂ, “ಅವರೇ (ಯತೀಂದ್ರ) ನಮ್ಮ ಹೈಕಮಾಂಡ್. ಅವರ ಮಾತನ್ನು ನಾವು ಗೌರವದಿಂದ ಸ್ವೀಕರಿಸೋಣ,” ಎಂದರು. ಅಲ್ಲದೆ, ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಶಾಸಕ ಬಸವರಾಜು ಅವರು ಕೇಳಿರುವ ಸ್ಪಷ್ಟನೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ಯಾವುದೇ ವಿಷಯವಿದ್ದರೂ ದೆಹಲಿಯ ನಾಯಕರು (ಹೈಕಮಾಂಡ್) ಉತ್ತರಿಸುತ್ತಾರೆ,” ಎಂದು ಮಾರ್ಮಿಕವಾಗಿ ನುಡಿದರು.

