ಮೈಸೂರು, ಮೇ.31: ಮೈಸೂರಿನ ಹೆಸರಾಂತ ಜೆಎಸ್ಎಸ್ ಆಸ್ಪತ್ರೆಯಲ್ಲಿ ಉಚಿತ ಸಾಮಾನ್ಯ ಹೆರಿಗೆ ಮತ್ತು ರಿಯಾಯಿತಿ ದರದಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಶೈಕ್ಷಣಿಕ ಮತ್ತು ಸಮಾಜಸೇವಾ ಕ್ಷೇತ್ರಗಳಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ 70 ವರ್ಷಗಳ ನಿರಂತರ ಸಾಧನೆಗಳ ಸಂಸ್ಮರಣಾರ್ಥವಾಗಿ ಮತ್ತು ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಜಿಎಸ್‌ಎಸ್ ಆಸ್ಪತ್ರೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜೆ ಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಬೆಟಸೂರ ಮಠ್ ತಿಳಿಸಿದರು.
ಗರ್ಭಿಣಿ ಮತ್ತು ಹೆರಿಗೆ ಆರೈಕೆ ಅಭಿಯಾನ ಮೇ 24ರಿಂದ ಪ್ರಾರಂಭವಾಗಿದ್ದು, ಜೂನ್ 30 ರ ವರೆಗೂ ಇರಲಿದೆ.
ಉಚಿತ ಸಾಮಾನ್ಯ ಹೆರಿಗೆ ಸೌಲಭ್ಯ ಹಾಗೂ ರಿಯಾಯಿತಿ ದರದಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಬರುವವರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಅಭಿಯಾನದಲ್ಲಿ ಸಾಮಾನ್ಯ ಹೆರಿಗೆ ಮತ್ತು ಔಷಧಿಗಳು ಸಂಪೂರ್ಣ ಉಚಿತವಾಗಿರುತ್ತದೆ,ಸಿಸೇರಿಯನ್‌ಗೆ ಶೇ.40ರಿಂದ 50ರಷ್ಟು ರಿಯಾಯಿತಿ, ಜನಿಸಿದ ಮಗವಿನ ಹೆಚ್ಚಿನ ಚಿಕಿತ್ಸೆಗೆ ಎನ್‌ಐಸಿಯುಗೆ ದಾಖಲಾದರೆ ಚಿಕಿತ್ಸೆ ವೆಚ್ಚದಲ್ಲಿ ರಿಯಾಯಿತಿ ಹಾಗೂ ಆಸ್ಪತ್ರೆಯಿಂದ 25 ಕಿ.ಮಿ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇರುತ್ತದೆ ಮತ್ತು ಜೂನ್ 30ರೊಳಗೆ ನೋಂದಣಿಯಾದವರಿಗೆ ಹಾಗೂ ಸಾಮಾನ್ಯ ವಾರ್ಡ್‌ಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತದೆ.
ಜೆಎಸ್ಎಸ್ ಆಸ್ಪತ್ರೆಯಲ್ಲಿ ಮೇ 24ರಿಂದ ಇಲ್ಲಿಯವರೆಗೆ ಸುಮಾರು 53 ಮಹಿಳೆಯರು ಹೆರಿಗೆಗೆ ದಾಖಲಾಗಿದ್ದು ಇದರಲ್ಲಿ ಸುಮಾರು 23 ಮಂದಿಗೆ ಉಚಿತವಾಗಿ ಸಾಮಾನ್ಯ ಹೆರಿಗೆ ಮತ್ತು 30 ಜನರಿಗೆ ಸಿಸೇರಿಯನ್ ಹೆರಿಗೆಗಳನ್ನು ಮಾಡಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಹಾಗಾಗಿ ಯಾವುದೇ ಅಳುಕಿಲ್ಲದೆ ಅವಶ್ಯಕತೆ ಇರುವವರು ದೈರ್ಯದಿಂದ ಆಸ್ಪತ್ರೆಗೆ ಬರಬೇಕೆಂದು ಬೆಟಸೂರ ಮಠ್ ಮನವಿ ಮಾಡಿದರು.
ಪ್ರತಿನಿತ್ಯ ಗರ್ಭಿಣಿಯರ ದಾಖಲಾತಿ ಕೂಡ ಹೆಚ್ಚಾಗಿ ಕಂಡುಬರುತಿದ್ದು, ಗ್ರಾಮೀಣ ಭಾಗದ ಜನರ ಆರ್ಥಿಕ ಮತ್ತು
ಸಾಮಾಜಿಕ ಸ್ಥಿತಿಯನ್ನು ಮನಗಂಡು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಸೌಲಭ್ಯವು ಜೂನ್ 30ರವರೆಗೂ ಲಭ್ಯವಿದ್ದು, ಈ ಸದಾವಕಾಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳ ಬೇಕೆಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಜೆ ಎಸ್ ಎಸ್ ಎ ಹೆಚ್ ಇ ಆರ್ ಉಪಕುಲಪತಿ ಡಾಕ್ಟರ್ ಸುಧೀಂದ್ರ ಸಿಂಗ್, ಜೆ ಎಸ್ ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್ ಆರ್, ಜೆ ಎಸ್ ಎಸ್ ಮೆಡಿಕಲ್ ಕಾಲೇಜು, ಪ್ರಾಂಶುಪಾಲರಾದ ಡಾಕ್ಟರ್ ಹೆಚ್ ಬಸವನ ಗೌಡಪ್ಪ ಹಾಗೂ ಡಾಕ್ಟರ್ ಸುಮಾ ಮತ್ತು ಡಾ.ಶೃಂಗ ಮತ್ತಿತರರು ಉಪಸ್ಥಿತರಿದ್ದರು