ಬೆಂಗಳೂರು: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಹಾತ್ಮ ಗಾಂಧೀಜಿ ಹೆಸರಿನ ಯೋಜನೆಯ ಹೆಸರು ಬದಲಿಸಿ ಬಿಜೆಪಿ ಐತಿಹಾಸಿಕ ಪ್ರಮಾದವೆಸಗಿದ್ದು,ಗ್ರಾಮ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ, 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮೂಲಕ ರಾಜ್ಯ ಸರ್ಕಾರದ ಮೇಲೆ ಹೊರೆ ಹಾಕಿದೆ ಕೇಂದ್ರ ಸರ್ಕಾರದ ಈ ನೀತಿಯನ್ನು ಹೇಗೆ ವಿರೋಧಿಸಬೇಕು ಎಂದು ಇದೇ 27ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಮುಂದಿನ ಹೋರಾಟವನ್ನು ಪ್ರಕಟಿಸಲಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಏಕೈಕ ಆರ್ಥಿಕ ಜಾಲ ಎಂದರೆ ಮನರೇಗ ಯೋಜನೆಯ ಉದ್ಯೋಗ ಖಾತರಿ. ಮನರೇಗ ಯೋಜನೆಯನ್ನು ಸಂಸತ್ತಿನಲ್ಲಿ ಚರ್ಚೆ ಮಾಡದೇ, ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೇ, ಸ್ಥಾಯಿಸಮಿತಿಯ ಪರಾಮರ್ಶೆಗೂ ಅವಕಾಶ ನೀಡದೇ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಬದಲಾವಣೆ ಮಾಡಲಾಗಿದೆ. ಈ ಯೋಜನೆಯಲ್ಲಿ ಬದಲಾವಣೆ ತರಲು ಯಾರೋಬ್ಬರೂ ಪ್ರಸ್ತಾವನೆ, ಮನವಿ ನೀಡಿರಲಿಲ್ಲ. ಆದರೂ ಇದನ್ನು ಮಾಡಿರುವ ಹಿಂದೆ ರಾಷ್ಟ್ರಪಿತರಿಗೆ ಅಪಮಾನ ಮಾಡುವ ಉದ್ದೇಶ ಇದೆ. ಇದು ಬಡ ಜನರ ಜೀವನದ ಮೇಲಿನ ದಾಳಿಯಾಗಿದೆ” ಎಂದು ಹರಿಹಾಯ್ದರು.
ಮಹಾತ್ಮ ಗಾಂಧಿ ಅವರು ಸ್ವರಾಜ್ಯ ಹಾಗೂ ಗ್ರಾಮ ಪಂಚಾಯಿತಿಗಳ ಮೇಲೆ ನಂಬಿಕೆ ಇಟ್ಟಿದ್ದವರು. ಆದರೆ ಈಗ ಕೇಂದ್ರ ಸರ್ಕಾರ ದೆಹಲಿಯಲ್ಲಿ ಕೂತು ಸ್ಥಳೀಯ ಸರ್ಕಾರ, ಪಂಚಾಯ್ತಿಗಳ ಆಯ್ಕೆಯನ್ನು ಮೀರಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಇಷ್ಟು ದಿನಗಳ ಕಾಲ ಈ ಯೋಜನೆಯಲ್ಲಿ 90% ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು, ಉಳಿದ 10% ಅನುದಾನವನ್ನು ರಾಜ್ಯ ಸರ್ಕಾರಗಳು ಒದಗಿಸಬೇಕಾಗಿತ್ತು. ಆದರೆ ಈಗ, ಈ ಯೋಜನೆಯಲ್ಲಿನ ಅನುದಾನದ ಪಾಲನ್ನು 60:40 ಅನುಪಾತಕ್ಕೆ ಪರಿವರ್ತಿಸಲಾಗಿದೆ. ರಾಜ್ಯ ಸರ್ಕಾರಗಳ ಮೇಲೆ ಹೆಚ್ಚು ಹೊರೆ ಹಾಕುತ್ತಿದೆ ಎಂದರು.
ಯುಪಿಎ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಯೋಜನೆಗಳ ಹೆಸರನ್ನು ಬದಲಾಯಿಸುವುದು ಈ ಸರ್ಕಾರದ ಮುಖ್ಯ ಗುರಿಯಾಗಿದೆ. ಸಾರ್ವಜನಿಕರು ಇದನ್ನು ಕಟುವಾಗಿ ವಿರೋಧಿಸಬೇಕು. ಕೇಂದ್ರ ಸರ್ಕಾರದ ಈ ನೀತಿಯನ್ನು ಹೇಗೆ ವಿರೋಧಿಸಬೇಕು ಎಂದು ಇದೇ 27ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಕೇಂದ್ರದ ಈ ನೀತಿ ವಿರುದ್ಧ ಇಂಡಿಯಾ ಮೈತ್ರಿಕೂಟ ಸೇರಿದಂತೆ ಇಡೀ ಭಾರತ ದೇಶ ಒಟ್ಟಾಗಿ ವಿರೋಧ ಮಾಡಬೇಕು. ಈ ಬದಲಾವಣೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಸಾಧ್ಯವಾದಷ್ಟು ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.
“2014ರಿಂದ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣವನ್ನು ಮಾಡಿಕೊಂಡು ಬಂದಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯ ಗಾಂಧಿ ಹಾಗೂ ರಾಹುಲ್ ಗಾಂಧಿ ಯಾವುದೇ ವ್ಯವಹಾರ ನಡೆಸಿಲ್ಲವಾದರೂ ಅವರನ್ನು ಆರೋಪದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ. ಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸುವ ಮೂಲಕ ದ್ವೇಷ ರಾಜಕಾರಣಕ್ಕೆ ಶಾಸ್ತಿ ಮಾಡಿದೆ, ಸತ್ಯಕ್ಕೆ ಜಯ ಸಿಕ್ಕಿದೆ”.“ಕಳೆದ 11 ವರ್ಷಗಳ ಸುಳ್ಳು ಭರವಸೆ ಹಾಗೂ ಸುಳ್ಳು ಆರೋಪಗಳು ಈಗ ಜನರ ಮುಂದೆ ಅನಾವರಣಗೊಂಡಿದ್ದು, ಜನರು ಈಗ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳನ್ನು ತಮ್ಮ ಮುಂದಿನ ಆಯ್ಕೆಗೆ ಪರಿಗಣಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಸಂಸತ್ತಿನ ಒಳಗೆ ಹಾಗೂ ಹೊರಗೆ ತಮ್ಮ ದಿಟ್ಟ ನಾಯಕತ್ವ ಪ್ರದರ್ಶಿಸುತ್ತಿದ್ದು, ಪಕ್ಷವನ್ನು ಮತ್ತೆ ಬಲಿಷ್ಠವಾಗಿ ನಿರ್ಮಿಸಲು ನಾವೆಲ್ಲರೂ ಬದ್ಧವಾಗಿದ್ದೇವೆ” ಎಂದು ತಿಳಿಸಿದರು.

