ಮೈಸೂರು, ಮೇ.25: ನಾನು ಎಂಬುದನ್ನು ಬಿಟ್ಟು ದೇವರ ಸ್ಮರಣೆ ಮಾಡಿ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನುಡಿದರು.
ಸ್ವಾಮೀಜಿಯವರ 82 ನೇ ವರ್ಧಂತಿ ಪ್ರಯುಕ್ತ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮದ ವೇಳೆ ಸ್ವಾಮೀಜಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿ ಮಾತನಾಡಿದರು.
ಮನದಲ್ಲಿರುವ ಎಲ್ಲಾ ಯೋಚನೆಗಳನ್ನು ಬಿಟ್ಟು ಮನಸಾರೆ ಪ್ರಾರ್ಥನೆ ಮಾಡಿ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಶ್ರೀ ದತ್ತ ವೆಂಕಟರಮಣ ಸ್ವಾಮಿ ಸನ್ನಿಧಿಗೆ ಬಂದು ಗೋವಿಂದನ ಸ್ಮರಣೆ ಮಾಡಿದರೆ,ಆ ದೇವನನ್ನು ನೆನೆದರೆ ಕಷ್ಟ ಕೋಟಲೆಗಳಿಂದ ಹೊರ ಬರಬಹುದು ಶಾಂತಿ,ನೆಮ್ಮದಿ ಸಿಗಲಿದೆ ಎಂದು ಶ್ರೀಗಳು ತಿಳಿಸಿದರು.
ನಾದಮಂಟಪದಲ್ಲಿ ಪ್ರತ್ಯಕ್ಷ ಪಾದಪೂಜೆಯನ್ನು ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ನೆರವೇರಿಸಿದರು.
ನಂತರ ಚೈತನ್ಯ ಅರ್ಚನೆ ದತ್ತ ಪೀಠದ ಬಿರುದು ಪ್ರದಾನ ಮಾಡಲಾಯಿತು.
ವೇದ ನಿಧಿ – ಶ್ರೀ ಕಪಿಲವಾಯಿ ರಾಮ ಸೋಮಯಾಜುಲು, ಬಾಪಟ್ಟ (ವೈದಿಕ ಕೈಂಕರ್ಯಗಳು – ಕಾಂಡತ್ರಯ ಪ್ರೌತ ಪ್ರಯೋಗ)
ಶಾಸ್ತ್ರ ನಿಧಿ – ಶ್ರೀ ಬ್ರಜ್ ಭೂಷಣ್ ಓಝಾ, ವಾರಾಣಸಿ (ವ್ಯಾಕರಣ)
ನಾದ ನಿಧಿ – ಶ್ರೀ ನಾಗೈ ಕೆ.ಮುರಳೀಧರನ್, ಚೆನ್ನೈ (ಕರ್ನಾಟಕ ಸಂಗೀತ)
ದತ್ತ ಪೀಠ ಆಸ್ಥಾನ ವಿದ್ವಾನ್ – ಶ್ರೀ ಪ್ರಭಲ ಸುಬ್ರಹ್ಮಣ್ಯ ಶರ್ಮಾ, ರಾಜಮಂಡ್ರಿ (ವಾಸ್ತು ಶಾಸ್ತ್ರ)
ದತ್ತ ಪೀಠ ಆಸ್ಥಾನ ವಿದ್ವಾನ್ -ಶ್ರೀ ಮಾಮಿಳ್ಳಪಲ್ಲಿ ಮೃತ್ಯುಂಜಯ ಪ್ರಸಾದ್, ತೆನಾಲಿ (ಶೈವಾಗಮ)
ದತ್ತ ಪೀಠ ಆಸ್ಥಾನ ವಿದ್ವಾನ್ – ತ್ರಿಚೂರ್ ಸಹೋದರರು ಶ್ರೀಕೃಷ್ಣಮೋಹನ್ ಮತ್ತು ರಾಮ್ ಕುಮಾರ್ ಮೋಹನ್, ತ್ರಿಚೂರ್ (ಕರ್ನಾಟಕ ಸಂಗೀತ)
ಸಸ್ಯ ಬಂಧು – ಶ್ರೀಮತಿ ಮಾಯಾ ಸೀತಾರಾಮ್, ಮೈಸೂರು (ಬೋನ್ಸಾಯ್)
ಜಯಲಕ್ಷ್ಮಿ ಪುರಸ್ಕಾರ – ಶ್ರೀಮತಿ ಕರುಮೂರಿ ಲಲಿತಮ್ಮ, ವಿಜಯವಾಡ (ಸಮುದಾಯ ಸೇವೆ)
ದತ್ತ ಪೀಠ ಬಂಧು – ಶ್ರೀ ಸಂಪರ ನಾಗ ಸಾಯಿ ರಾಮಚಂದ್ರ ಶೇಖರ್, ಹೈದರಾಬಾದ್ (ಸಮುದಾಯ ಸೇವೆ)
ಬೆಳಿಗ್ಗೆ ಪೂಜ್ಯ ಸ್ವಾಮೀಜಿಯವರನ್ನು ನೃತ್ಯ,ಕೋಲಾಟದೊಂದಿಗೆ ಭವ್ಯ ಮೆರವಣಿಗೆಯಲ್ಲಿ ನಾದ ಮಂಟಪಕ್ಕೆ ಕರೆತಂದುದು ವಿಶೇಷವಾಗಿತ್ತು.
ಕಾಶಿ ವಿಶ್ವನಾಥ ದೇವಾಲಯ,ಶ್ರೀ ದತ್ತ ವೆಂಕಟರಮಣ ಸ್ವಾಮಿ,ಶನೈಶ್ಚರ ಸ್ವಾಮಿ,ರಾಮದೇವರ ದೇವಸ್ಥಾನ ಬೆಟ್ಟದಪುರದ ಶಿವ ದೇವಾಲಯ ಸೇರಿದಂತೆ ನಾನಾ ದೇವಾಲಯಗಳಿಂದ ತರಲಾದ ತೀರ್ಥ ಪ್ರಸಾದವನ್ನು ಶ್ರೀ ಸ್ವಾಮೀಜಿಯವರಿಗೆ ನೀಡಲಾಯಿತು.
ಕಾಶ್ಮೀರದ ನಿವಾಸಿ ಮಹಮ್ಮದ್ ಎಂಬವರು ಕೈನಿಂದ ನೇಯ್ದಿರುವ ರಾಧಾ,ಕೃಷ್ಣ ಉದ್ಯಾನದಲ್ಲಿ ವಿಹರಿಸುತ್ತಿರುವ ಚಿತ್ರವುಳ್ಳ ಸುಂದರವಾದ ಕಾಶ್ಮೀರಿ ಶಾಲನ್ನು ಕಮಲ್ ಕಪೂರ್ ದಂಪತಿ ಶ್ರೀಗಳಿಗೆ ಸಮರ್ಪಿಸಿದರು.ಸ್ವಾಮೀಜಿ ಅದನ್ನು ಧರಿಸಿ ಶಾಲಿನ ಸೌಂದರ್ಯ ವನ್ನು ಮತ್ತು ಮಹಮ್ಮದ್ ಅವರ ಕಲೆಯನ್ನು ಶ್ಲಾಘಿಸಿದರು.