Fri. Mar 6th, 2026

ಬೆಂಗಳೂರಿನಲ್ಲಿ ಕಸವೇ ರಸ: ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದಲ್ಲಿ 50 ಪಟ್ಟು ಹೆಚ್ಚಳ, ಕೋಟಿ ಮೊತ್ತದ ಆದಾಯ!

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಘನತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಕ್ರಾಂತಿ ಶುರುವಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕಡಿಮೆ ಮೌಲ್ಯದ ಪ್ಲಾಸ್ಟಿಕ್ (RDF) ಸಂಗ್ರಹಣೆಯಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ಸಂಸ್ಥೆಯ ಸಿಇಒ ಕರೀಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಅಕ್ಟೋಬರ್ ವೇಳೆಗೆ ಕೇವಲ ಶೇ. 10ರಷ್ಟಿದ್ದ ಆರ್‌ಡಿಎಫ್ ಸಂಗ್ರಹಣೆ, ಈಗ ಬರೋಬ್ಬರಿ 50 ಪಟ್ಟು ಹೆಚ್ಚಳವಾಗಿದೆ. ಪ್ರಸ್ತುತ ಪ್ರತಿದಿನ 520 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದನ್ನು ಶೀಘ್ರದಲ್ಲೇ 1,000 ಮೆಟ್ರಿಕ್ ಟನ್‌ಗೆ ಏರಿಸುವ ಗುರಿ ಹೊಂದಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 19,470 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಸಂಗ್ರಹಿಸಲಾಗಿದ್ದು, ಇದರಲ್ಲಿ ಹೆಚ್ಚಿನ ಭಾಗವನ್ನು ಇಂಧನವಾಗಿ ಬಳಸಲು ದಾಲ್ಮಿಯಾ ಸಿಮೆಂಟ್ಸ್ ಘಟಕಕ್ಕೆ ರವಾನಿಸಲಾಗಿದೆ ಎಂದರು.

ಆರ್ಥಿಕ ಬಲ ತಂದ ಇಪಿಆರ್ ಕ್ರೆಡಿಟ್:

ತ್ಯಾಜ್ಯ ಕೇವಲ ಹೊರೆಯಾಗದೆ ಆದಾಯದ ಮೂಲವೂ ಆಗಿದೆ. ಡಿಸೆಂಬರ್ ಮತ್ತು ಜನವರಿ ಅವಧಿಯಲ್ಲಿ 3,600 ಇಪಿಆರ್ (EPR) ಕ್ರೆಡಿಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಇದರಿಂದ ₹54 ಲಕ್ಷದಿಂದ ₹1.80 ಕೋಟಿವರೆಗೆ ಆದಾಯ ನಿರೀಕ್ಷಿಸಲಾಗಿದೆ. ವಿಶೇಷವೆಂದರೆ, ಸಾರ್ವಜನಿಕರಿಂದ ಸಂಗ್ರಹಿಸಲಾದ ದಂಡದ ಮೊತ್ತದಿಂದಲೇ (ತಿಂಗಳಿಗೆ ಸರಾಸರಿ ₹60 ಲಕ್ಷ) ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಟ್ರ್ಯಾಕ್ಟರ್ ಖರೀದಿಸಲು ನಿರ್ಧರಿಸಲಾಗಿದೆ ಎಂದರು.

ರಾಯಭಾರಿಗಳ ನೇಮಕ:

ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ, ಖ್ಯಾತ ನಟ ಅನಿರುದ್ಧ ಜಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ಅವರನ್ನು ಸ್ವಚ್ಛ ಸರ್ವೇಕ್ಷಣ್ ರಾಯಭಾರಿಗಳಾಗಿ ನೇಮಿಸಲಾಗಿದೆ. ಈ ನಿಟ್ಟಿನಲ್ಲಿ ಮಾರ್ಚ್ 9ರಂದು ಟೌನ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‌ ಎಂದರು.

ದೂರು ನೀಡಲು ಅವಕಾಶ:

ನಗರದ ಯಾವುದೇ ಭಾಗದಲ್ಲಿ ಕಸದ ಸಮಸ್ಯೆ ಇದ್ದಲ್ಲಿ ಸಾರ್ವಜನಿಕರು ತಕ್ಷಣ ಸಹಾಯವಾಣಿ ಸಂಖ್ಯೆ 1533 ಅಥವಾ ವಾಟ್ಸಾಪ್ ಸಂಖ್ಯೆ 94481 97197 ಕ್ಕೆ ದೂರು ನೀಡಬಹುದು. ಅಲ್ಲದೆ ‘ಸಹಾಯ 2.0’ ಆಪ್ ಮೂಲಕವೂ ಫೋಟೋ ಸಹಿತ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.


Share this with Friends

Related Post