Thu. Mar 12th, 2026

ಗ್ಯಾಸ್ ಅಭಾವ, ಸೌದೆಗೆ ಹೆಚ್ಚಿದ ಡಿಮ್ಯಾಂಡ್: ಕಾಡು ರಕ್ಷಣೆಗೆ ಸಚಿವ ಈಶ್ವರ ಖಂಡ್ರೆ ಕಡಕ್ ಸೂಚನೆ

Share this with Friends

ಬೆಂಗಳೂರು: ದೇಶಾದ್ಯಂತ ಸೃಷ್ಟಿಯಾಗಿರುವ ಅಡುಗೆ ಅನಿಲ (LPG) ಅಭಾವದ ಬಿಸಿ ಈಗ ರಾಜ್ಯದ ಹಸಿರು ಹೊದಿಕೆಗೆ ತಟ್ಟುವ ಭೀತಿ ಎದುರಾಗಿದೆ. ಅನಿಲ ಸಿಲಿಂಡರ್‌ಗಳ ಕೊರತೆಯಿಂದಾಗಿ ಸೌದೆಗೆ ದಿಢೀರ್ ಬೇಡಿಕೆ ಬಂದಿದ್ದು, ಕಾಡಿನ ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯನ್ನು ‘ಹೈ-ಅಲರ್ಟ್’ ಮಾಡಿರುವ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ಅಕ್ರಮ ಮರ ಕಡಿತಲೆ ನಡೆದರೆ ಅಧಿಕಾರಿಗಳನ್ನೇ ಮನೆಗೆ ಕಳುಹಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಏನಿದು ಆತಂಕದ ಸಂಗತಿ?

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಬಿಕ್ಕಟ್ಟಿನಿಂದಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಿಗೆ ವಾಣಿಜ್ಯ ಸಿಲಿಂಡರ್‌ಗಳು ಸಿಗುತ್ತಿಲ್ಲ. ಇತ್ತ ಗೃಹ ಬಳಕೆದಾರರಿಗೂ ಗ್ಯಾಸ್ ಪೂರೈಕೆ ವಿಳಂಬವಾಗುತ್ತಿದೆ. ಇದರ ನೇರ ಪರಿಣಾಮ ಸೌದೆಯ ಮೇಲೆ ಬಿದ್ದಿದೆ. ಅಗ್ಗವಾಗಿ ಮತ್ತು ಸುಲಭವಾಗಿ ಸೌದೆ ಪಡೆಯಲು ಕಿಡಿಗೇಡಿಗಳು ಕಾಡಿನ ಮರಗಳ ಮೇಲೆ ಕಣ್ಣಿಟ್ಟಿರುವುದು ಸರ್ಕಾರದ ನಿದ್ದೆಗೆಡಿಸಿದೆ.

ಕಾಡಂಚಿನಲ್ಲಷ್ಟೇ ಅಲ್ಲ, ರಸ್ತೆ ಬದಿಯಲ್ಲೂ ಹದ್ದಿನ ಕಣ್ಣು:

ಕೇವಲ ದಟ್ಟಾರಣ್ಯ ಮಾತ್ರವಲ್ಲ, ರಸ್ತೆ ಬದಿಯ ಮರಗಳು, ಇಲಾಖೆಯ ನೆಡುತೋಪುಗಳು ಹಾಗೂ ಸರ್ಕಾರಿ ಜಮೀನಿನ ಮರಗಳೂ ಈಗ ಅಪಾಯದಲ್ಲಿವೆ. ಸೌದೆ ಮಾಫಿಯಾ ಸಕ್ರಿಯವಾಗುವ ಮುನ್ನವೇ ಎಚ್ಚೆತ್ತಿರುವ ಸಚಿವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿದ್ದಾರೆ. “ಎಲ್ಲಾ ವೃತ್ತ ಹಾಗೂ ವಲಯಗಳಲ್ಲಿ ಹಗಲು-ರಾತ್ರಿ ಕಟ್ಟುನಿಟ್ಟಿನ ಗಸ್ತು ನಡೆಸಬೇಕು. ಯಾವುದೇ ಕಾರಣಕ್ಕೂ ಒಂದೇ ಒಂದು ಮರ ಅಕ್ರಮವಾಗಿ ಕಡಿಯಲ್ಪಟ್ಟರೂ ಸಹಿಸುವುದಿಲ್ಲ” ಎಂದು ಸಚಿವರು ಗುಡುಗಿದ್ದಾರೆ.

ಅಧಿಕಾರಿಗಳಿಗೆ ‘ಡೆಡ್ ಲೈನ್’:

ಈ ಬಾರಿ ಸಚಿವರು ಕೇವಲ ಆದೇಶ ನೀಡಿ ಸುಮ್ಮನಾಗಿಲ್ಲ. ಅಕ್ರಮ ಮರ ಕಡಿತಲೆ ನಡೆದರೆ ಆಯಾ ವ್ಯಾಪ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ತಿಳಿಸಿದ್ದಾರೆ. ಅರಣ್ಯ ರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ಸಿಕ್ಕ ಬೆನ್ನಲ್ಲೇ ಇಲಾಖೆಯ ಸಿಬ್ಬಂದಿ ಈಗ ಕಾಡಿನ ರಕ್ಷಣೆಗೆ ಸನ್ನದ್ಧರಾಗಿದ್ದಾರೆ.

 


Share this with Friends

Related Post