Wed. Mar 18th, 2026

ಜಿಬಿಎ ಚುನಾವಣೆ: ಮತದಾರರ ಪಟ್ಟಿ ಆಕ್ಷೇಪಣೆಗೆ ಮಾರ್ಚ್ 30ರವರೆಗೆ ಕಾಲಾವಕಾಶ ವಿಸ್ತರಣೆ

Share this with Friends

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳ ಮುಂಬರುವ ಸಾರ್ವತ್ರಿಕ ಚುನಾವಣೆ-2026ಕ್ಕೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಪರಿಷ್ಕೃತ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ದೂರು ಮತ್ತು ಆಕ್ಷೇಪಣೆ ಸಲ್ಲಿಸಲು ಇದ್ದ ಅವಧಿಯನ್ನು ಮಾರ್ಚ್ 30ರವರೆಗೆ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಪಕ್ಷಗಳ ಮನವಿಗೆ ಸ್ಪಂದನೆ:

ಈ ಮೊದಲು ದೂರು ಸಲ್ಲಿಸಲು ಮಾರ್ಚ್ 20 ಕೊನೆಯ ದಿನವಾಗಿತ್ತು. ಆದರೆ, ವಿವಿಧ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅವಧಿಯನ್ನು ವಿಸ್ತರಿಸುವಂತೆ ಒಕ್ಕೊರಲಿನಿಂದ ಮನವಿ ಮಾಡಿದ್ದರು. ಈ ಪ್ರಸ್ತಾವನೆಯನ್ನು ಪರಿಗಣಿಸಿದ ಚುನಾವಣಾ ಆಯೋಗವು ಈಗ ಹತ್ತು ದಿನಗಳ ಕಾಲಾವಕಾಶವನ್ನು ಹೆಚ್ಚಿಸಿದೆ.

ಬದಲಾದ ವೇಳಾಪಟ್ಟಿ:

ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ: ಮಾರ್ಚ್ 30, 2026.

ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಏಪ್ರಿಲ್ 18, 2026 (ಈ ಹಿಂದೆ ಏಪ್ರಿಲ್ 6ಕ್ಕೆ ನಿಗದಿಯಾಗಿತ್ತು).

ಪರಿಶೀಲನೆ ಎಲ್ಲಿ?

ವಾರ್ಡ್‌ವಾರು ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯ ಪ್ರತಿಗಳು ಆಯಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ (ERO), ಸಹಾಯಕ ಮತದಾರರ ನೋಂದಣಾಧಿಕಾರಿ (AERO) ಕಚೇರಿಗಳು ಹಾಗೂ ಆಯಾ ವಾರ್ಡ್ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿವೆ.

ಆನ್‌ಲೈನ್ ಸೌಲಭ್ಯ:

ಮತದಾರರು ಡಿಜಿಟಲ್ ರೂಪದಲ್ಲಿಯೂ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು. ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ gba.karnataka.gov.in ಗೆ ಭೇಟಿ ನೀಡಿ, ‘Search by Name’ ಅಥವಾ ‘Search by EPIC’ ಆಯ್ಕೆಗಳ ಮೂಲಕ ಪಟ್ಟಿಯಲ್ಲಿ ತಮ್ಮ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಬಿಎ ಮುಖ್ಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share this with Friends

Related Post