ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಸೋಮವಾರ ಬಿಡುಗಡೆ ಮಾಡಿದ್ದಾರೆ. ಹೊಸ ಪಟ್ಟಿಯ ಪ್ರಕಾರ ಒಟ್ಟು 88,92,528 ಮತದಾರರು ಗುರುತಿಸಲ್ಪಟ್ಟಿದ್ದಾರೆ.
ಮತದಾರರ ಅಂಕಿ-ಅಂಶ:
ಒಟ್ಟು ಮತದಾರರಲ್ಲಿ 45,69,752 ಪುರುಷರು, 43,21,143 ಮಹಿಳೆಯರು ಹಾಗೂ 1,635 ಇತರರು ಸೇರಿದ್ದಾರೆ. ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 369 ವಾರ್ಡ್ಗಳಿದ್ದು, ಮತದಾನಕ್ಕಾಗಿ 8,024 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ:
ಕರಡು ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಮಾರ್ಚ್ 10 ರಿಂದ 16 ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಪ್ರಕ್ರಿಯೆ ಮುಗಿದ ನಂತರ, ಏಪ್ರಿಲ್ 6, 2026 ರಂದು ಅಧಿಕೃತವಾಗಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಹೆಸರು ಪರಿಶೀಲನೆ ಹೇಗೆ?
ಮತದಾರರು ತಮ್ಮ ಹೆಸರನ್ನು ಅಧಿಕೃತ ವೆಬ್ಸೈಟ್ https://gba.karnataka.gov.in ಮೂಲಕ ಪರಿಶೀಲಿಸಿಕೊಳ್ಳಬಹುದು. ಯಾವುದೇ ಗೊಂದಲಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ:
ಬೆಂಗಳೂರು ಕೇಂದ್ರ: 080-22975803
ಉತ್ತರ: 080-22975936
ದಕ್ಷಿಣ: 9480685704
ಪೂರ್ವ: 9480685706
ಪಶ್ಚಿಮ: 9480685703
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮನೆಮನೆ ಕಸ ಸಂಗ್ರಹಣೆ ವಾಹನಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ಸೇರಿದಂತೆ ವಿವಿಧ ವಲಯಗಳ ಅಪರ ಆಯುಕ್ತರು ಉಪಸ್ಥಿತರಿದ್ದರು

