ಬೆಂಗಳೂರು,ಏ.1: ಲೋಕಸಭಾ ಚುನಾವಣೆ ಸಮಯದಲ್ಲಿ ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ.
15 ವರ್ಷದ ಬಳಿಕ ಎಲ್ಲಾ ವರ್ಗದ ಗ್ರಾಹಕರಿಗೆ ವಿದ್ಯುತ್ ಬಿಲ್ ಸ್ವಲ್ಪ ಮಟ್ಟಿಗೆ ಇಳಿಕೆಯಾಗಲಿದೆ. ಗೃಹ ಬಳಕೆಯಲ್ಲಿ 100 ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಪ್ರತಿ ಯೂನಿಟ್ ಮೇಲೆ 1.10 ರೂ. ಇಳಿಕೆಯಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆ ಇ ಆರ್ ಸಿ) ಫೆಬ್ರವರಿಯಲ್ಲಿ ಪ್ರಕಟಿಸಿದ ವಿದ್ಯುತ್ ದರ ಪರಿಷ್ಕರಣೆ ಆದೇಶ ಇಂದಿನಿಂದ ಜಾರಿಯಾಗಲಿದೆ.
ಗೃಹ ಬಳಕೆಯವರಿಗೆ ಇಂಧನ ಬಳಕೆ ಮೇಲಿನ ದರ ಕಡಿತಗೊಂಡರೆ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಬಳಕೆದಾರ ವರ್ಗದವರಿಗೆ ನಿಗದಿತ ಶುಲ್ಕದಲ್ಲೂ ಇಳಿಕೆಯಾಗಿದೆ.
ಗೃಹ ಬಳಕೆಯಲ್ಲಿ ಪ್ರಸ್ತುತ ಪ್ರತಿ ಯೂನಿಟ್ ದರ 7 ರೂ. ಇತ್ತು. ಈಗ ಗೃಹ ಬಳಕೆಯ ಶುಲ್ಕದ ಸ್ಲ್ಯಾಬ್ ರದ್ದು ಮಾಡಲಾಗಿದೆ. ಗ್ರಾಹಕರು ಎಷ್ಟೇ ಯೂನಿಟ್ ಖರ್ಚು ಮಾಡಿದರೆ ಪ್ರತಿ ಯೂನಿಟ್‌ಗೆ 5.90 ರೂ. ದರ ನಿಗದಿ ಮಾಡಲಾಗಿದೆ.
ಸರ್ಕಾರ 200 ಯೂನಿಟ್ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವುದರಿಂದ ಈ ಸೌಲಭ್ಯಕ್ಕೆ ಒಳಪಟ್ಟವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ.
ಈ ಯೋಜನೆಯ ಸೌಲಭ್ಯ ಪಡೆಯದವರು ಹಾಗೂ ತಿಂಗಳಿಗೆ 100 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಇದರ ಲಾಭ ಸಿಗಲಿದೆ.
ಗ್ರಾಹಕರಿಗೆ ದರ ಕಡಿತದ ಲಾಭ ಏಪ್ರಿಲ್ ಬಿಲ್‌ನಲ್ಲಿ ಬರುವುದಿಲ್ಲ. ಮೇ ತಿಂಗಳಿನಲ್ಲಿ ಬರುವ ಬಿಲ್‌ನಲ್ಲಿ ಈ ದರ ಅನ್ವಯವಾಗಲಿದೆ.