Sat. Mar 7th, 2026

ಸೈಬರ್ ಅಪರಾಧಗಳ ಮಟ್ಟಹಾಕಲು ಸರ್ಕಾರ ಬದ್ಧ: ಗೃಹ ಸಚಿವ ಡಾ. ಜಿ. ಪರಮೇಶ್ವರ್

Share this with Friends

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಕರ್ನಾಟಕ ಸರ್ಕಾರ ಸನ್ನದ್ಧವಾಗಿದೆ,ಸೈಬರ್ ಅಪರಾಧಗಳನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಅತ್ಯಾಧುನಿಕ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸಿಐಡಿ (CID) ಹಾಗೂ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ (CCITR) ಆಯೋಜಿಸಿದ್ದ ‘CIDECODE’ 3ನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಸೈಬರ್ ಅಪರಾಧಗಳ ತನಿಖೆ ಮತ್ತು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಲು ಆಧುನಿಕ ತಂತ್ರಜ್ಞಾನ ಹಾಗೂ ಕೌಶಲ್ಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶೇಷ ಸೈಬರ್ ಅಪರಾಧ ಘಟಕಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಾಗರಿಕರ ಸೈಬರ್ ಸುರಕ್ಷತೆಯನ್ನು ಖಚಿತಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಪ್ರಮುಖ ನಗರಗಳಲ್ಲಿ ಒಟ್ಟು 43 ಸಿಇಎನ್ (CEN) ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

CCITR ಕೊಡುಗೆ:

ರಾಜ್ಯ ಪೊಲೀಸ್ ಇಲಾಖೆಯನ್ನು ತಾಂತ್ರಿಕವಾಗಿ ಬಲಪಡಿಸುವಲ್ಲಿ ಸಿಸಿಐಟಿಆರ್ (CCITR) ಪಾತ್ರ ಮಹತ್ವದ್ದು. ಸೈಬರ್ ಪೊಲೀಸ್ ವ್ಯವಸ್ಥೆಗೆ ಅಗತ್ಯವಾದ ಸಂಶೋಧನಾ ಪ್ರಕಟಣೆಗಳು ಮತ್ತು ಅಧಿಕಾರಿಗಳಿಗೆ ಸುಧಾರಿತ ತಾಂತ್ರಿಕ ತರಬೇತಿ ನೀಡುವ ಮೂಲಕ ಈ ಕೇಂದ್ರವು ಅರ್ಥಪೂರ್ಣ ಕೊಡುಗೆ ನೀಡುತ್ತಿದೆ ಎಂದು ಅವರು ಶ್ಲಾಘಿಸಿದರು.

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ:

ಬೆಂಗಳೂರಿನ ಅಪರಾಧ ಪ್ರಕರಣಗಳ ಅಂಕಿಅಂಶಗಳನ್ನು ಹಂಚಿಕೊಂಡ ಸಚಿವರು, “ನಗರದಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಲ್ಲಿ ಶೇ. 30ರಷ್ಟು ಸೈಬರ್ ಅಪರಾಧಗಳೇ ಆಗಿವೆ. ವಿಶೇಷವಾಗಿ ಐಟಿ ಹಬ್ ಆಗಿರುವ ವೈಟ್‌ಫೀಲ್ಡ್ ಭಾಗದಲ್ಲಿ ಈ ಪ್ರಮಾಣ ಶೇ. 40ರಷ್ಟಿರುವುದು ಕಳವಳಕಾರಿ ಸಂಗತಿ. ಡೀಪ್‌ಫೇಕ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ನಾಗರಿಕರು ಮತ್ತು ಪೊಲೀಸರು ಹೆಚ್ಚಿನ ಜಾಗೃತಿ ವಹಿಸಬೇಕು,” ಎಂದು ಕರೆ ನೀಡಿದರು.

ತರಬೇತಿ ಮತ್ತು ಸಬಲೀಕರಣ:

ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರವು (CCITR) ಇದುವರೆಗೆ ದೇಶಾದ್ಯಂತ ಸುಮಾರು 46,000ಕ್ಕೂ ಹೆಚ್ಚು ಪೊಲೀಸ್ ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ. ರಾಜ್ಯದ 43 ಸೈಬರ್ ಆರ್ಥಿಕ ಮತ್ತು ಮಾದಕದ್ರವ್ಯ (CEN) ಪೊಲೀಸ್ ಠಾಣೆಗಳನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ, ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಿಇಒ ವಿನಾಯಕ ಗೋಡ್ಸೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 


Share this with Friends

Related Post