Fri. Mar 6th, 2026

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧ,ಒಪಿಎಸ್ ಕುರಿತು ಶೀಘ್ರವೇ ಸಂಪುಟದಲ್ಲಿ ತೀರ್ಮಾನ:ಸಿಎಂ

Share this with Friends

ಬೆಂಗಳೂರು: “ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನ್ಯಾಯಸಮ್ಮತ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಅದರಲ್ಲೂ ವಿಶೇಷವಾಗಿ ಹಳೆ ಪಿಂಚಣಿ ಯೋಜನೆ (OPS) ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ಶಿಕ್ಷಕರ ಸುವರ್ಣ ಮಹೋತ್ಸವ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಕರ ಹಿತರಕ್ಷಣೆ ವಿಷಯದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ಒಪಿಎಸ್ ಜಾರಿಗೆ ಸಮಾಲೋಚನೆ:

ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಒಪಿಎಸ್ ಜಾರಿ ಕುರಿತಂತೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬಗ್ಗೆ ಈಗಾಗಲೇ ಸರ್ಕಾರಿ ಮಟ್ಟದಲ್ಲಿ ಸಮಾಲೋಚನೆಗಳು ನಡೆಯುತ್ತಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಇದರೊಂದಿಗೆ ಶಿಕ್ಷಕರಿಗೆ ವೇತನ ಬಡ್ತಿ ನೀಡುವ ಕುರಿತು ಕೂಡ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸೇವಾನುಭವ ಮತ್ತು ನೇಮಕಾತಿ ಸ್ಮರಣೆ:

ತಾವು ಹಿಂದೆ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಐದು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು. ಅಲ್ಲದೆ, ಆರು ಮತ್ತು ಏಳನೇ ವೇತನ ಆಯೋಗಗಳ ಶಿಫಾರಸುಗಳನ್ನು ಜಾರಿ ಮಾಡುವ ಮೂಲಕ ಶಿಕ್ಷಕರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿರುವುದನ್ನು ಅವರು ಉಲ್ಲೇಖಿಸಿದರು.

ಸುಭದ್ರ ಸಮಾಜಕ್ಕೆ ಶಿಕ್ಷಣವೇ ಬುನಾದಿ:

“ಮಕ್ಕಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮೂಲಕ ಮಾತ್ರ ಸುಂದರ ಸಮಾಜ ಕಟ್ಟಲು ಸಾಧ್ಯ. ಶಿಕ್ಷಕರ ನಡವಳಿಕೆ ಮಕ್ಕಳಿಗೆ ಮಾದರಿಯಾಗಿರಬೇಕು. ಭವಿಷ್ಯದ ಪ್ರಜೆಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ಸಮರ್ಥವಾಗಿ ನಿಭಾಯಿಸಬೇಕು” ಎಂದು ಸಿಎಂ ಕರೆ ನೀಡಿದರು.

ಶಿಕ್ಷಣದ ಗುಣಮಟ್ಟದ ಬಗ್ಗೆ ಚಿಂತನೆ ಅಗತ್ಯ:

ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಶೇ. 12ರಿಂದ 15ರಷ್ಟಿದ್ದ ಸಾಕ್ಷರತೆ ಪ್ರಮಾಣ ಇಂದು ಶೇ. 74ಕ್ಕೆ ಏರಿಕೆಯಾಗಿದೆ. ಆದರೆ, ಈ ಶಿಕ್ಷಣವು ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆಯೇ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಮಾಜದಲ್ಲಿ ಬೇರೂರಿರುವ ಜಾತಿ ಪದ್ಧತಿಯು ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಬದಲಾವಣೆ ತರಲು ಅಡ್ಡಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವೈಚಾರಿಕತೆಯೇ ಸಂವಿಧಾನದ ಆಶಯ:

ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ವ್ಯಕ್ತಿಯೂ ಜವಾಬ್ದಾರಿಯುತವಾಗಿ ವಿಕಸನಗೊಳ್ಳಲು ವೈಜ್ಞಾನಿಕ ಮನೋಭಾವದ ಶಿಕ್ಷಣ ಅಗತ್ಯ. ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ಪ್ರತಿಯೊಬ್ಬರೂ ಮುಖ್ಯವಾಹಿನಿಗೆ ಬರಬೇಕಾದರೆ ಸಾಮಾಜಿಕ ಬದಲಾವಣೆ ಅನಿವಾರ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ತರ್ಕಬದ್ಧ ಆಲೋಚನೆ ಮತ್ತು ಪ್ರಶ್ನಿಸುವ ಗುಣವನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಶಿಕ್ಷಕರಿಂದಲೇ ಬದಲಾವಣೆ ಸಾಧ್ಯ:

“ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ಮಾಡುವ ಅದ್ಭುತ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಬುದ್ಧಿ, ಕರುಣೆ ಮತ್ತು ಕೌಶಲ್ಯಗಳ ಸಮ್ಮಿಲನವೇ ನೈಜ ವಿಕಾಸ ಎಂದು ಗಾಂಧೀಜಿ ಹೇಳಿದ್ದಾರೆ. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರೇ ಕಾರಣ” ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು. ಶಿಕ್ಷಕರು ಸಂವಿಧಾನಬದ್ಧ ಕರ್ತವ್ಯ ನಿರ್ವಹಿಸುವ ಮೂಲಕ ನಾಡಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ಕಿವಿಮಾತು ಹೇಳಿದರು


Share this with Friends

Related Post