Fri. Mar 6th, 2026

ಸಾರಿಗೆ ನೌಕರರ ಬೇಡಿಕೆಗೆ ಮಣಿದು ₹1,239 ಕೋಟಿ ಬಿಡುಗಡೆ ಮಾಡಿದ ಸರ್ಕಾರ; ಪ್ರತಿಭಟನೆ ವಾಪಸ್‌?

Share this with Friends

ಬೆಂಗಳೂರು: ರಾಜ್ಯ ಸಾರಿಗೆ ನೌಕರರ ಸಂಘಟನೆಗಳು ಗುರುವಾರ (ಫೆ. 19) ಕರೆ ನೀಡಿದ್ದ ಮುಷ್ಕರದ ಎಚ್ಚರಿಕೆಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ. ನೌಕರರ ದಶಕದ ಬೇಡಿಕೆಯಾಗಿದ್ದ ವೇತನ ಹಿಂಬಾಕಿ ಪಾವತಿಗೆ ಬರೋಬ್ಬರಿ ₹1,239 ಕೋಟಿ ಅನುದಾನ ಬಿಡುಗಡೆ ಮಾಡಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿಗಳೊಂದಿಗೆ ನಡೆಸಿದ ತುರ್ತು ಸಭೆಯ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, “ನೌಕರರ ಹಿತವೇ ನಮಗೆ ಮುಖ್ಯ. ಹೀಗಾಗಿ 2020 ಮತ್ತು 2022-23ನೇ ಸಾಲಿನ ಒಟ್ಟು 26 ತಿಂಗಳ ವೇತನ ಹಿಂಬಾಕಿ (Arrears) ಹಣವನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ, 2025ರ ಏಪ್ರಿಲ್‌ನಿಂದ ಹೊಸ ವೇತನ ಪರಿಷ್ಕರಣೆ ಜಾರಿಗೆ ಬರಲಿದೆ” ಎಂದು ಸ್ಪಷ್ಟಪಡಿಸಿದರು.

ಒಂದೆಡೆ ಬೇಡಿಕೆ ಈಡೇರಿಸಿದ ಸರ್ಕಾರ, ಇನ್ನೊಂದೆಡೆ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದೆ. ಮುಷ್ಕರಕ್ಕೆ ಮುಂದಾಗುವ ನೌಕರರ ವಿರುದ್ಧ ‘ಎಸ್ಮಾ’ (ESMA) ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಮತ್ತು ‘ಕೆಲಸವಿಲ್ಲದೆ ವೇತನವಿಲ್ಲ’ ನಿಯಮ ಅನ್ವಯಿಸಲಾಗುವುದು ಎಂದು ತಿಳಿಸಿದೆ.

ಪ್ರಯಾಣಿಕರು ನಿರಾಳ:

ಸರ್ಕಾರದ ಈ ನಿರ್ಧಾರದಿಂದಾಗಿ ನಾಳೆ ಬಸ್‌ ಸಂಚಾರ ಬಹುತೇಕ ಸುಗಮವಾಗಿರಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ನೌಕರರ ಸಂಘಟನೆಗಳು ಪೂರ್ಣ ಪ್ರಮಾಣದ 38 ತಿಂಗಳ ಬಾಕಿಗಾಗಿ ಪಟ್ಟು ಹಿಡಿದಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿವೆ.


Share this with Friends

Related Post