Fri. Nov 1st, 2024

ಸರ್ಕಾರ ಮೇಕೆದಾಟು ಯೋಜನೆ‌ ಬಗ್ಗೆ ನಿಲುವು ತಿಳಿಸಲಿ:ಅಶೋಕ್ ಆಗ್ರಹ

Share this with Friends

ಬೆಂಗಳೂರು, ಮಾ. 23: ಕಾಂಗ್ರೆಸ್‌ ಸರ್ಕಾರ ಜನರಿಗೆ ನೀರು ಹೇಗೆ ನೀಡುತ್ತೇವೆ ಎಂದು ತಿಳಿಸುವುದನ್ನು ಬಿಟ್ಟು ನೀರನ್ನು ಮಿತವಾಗಿ ಬಳಸುವ ಬಗ್ಗೆ ತಿಳಿ ಹೇಳುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದ್ದಾರೆ.

ಜನರು ಪ್ರಜ್ಞಾವಂತರಾಗಿದ್ದು ನೀರನ್ನು ಹೇಗೆ ಬಳಸಬೇಕೆಂಬುದು ಗೊತ್ತಿದೆ. ಸರ್ಕಾರ ಮೊದಲು ನೀರು ನೀಡುವ ಕುರಿತು ಮತ್ತು ಮೇಕೆದಾಟು ಯೋಜನೆ‌ ಬಗ್ಗೆ ನಿಲುವು ತಿಳಿಸಲಿ ಎಂದು ಒತ್ತಾಯಿಸಿದರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಾಧ್ಯಮ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಇಡೀ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಕೇಳಿಬಂದಿದೆ, ಜಲಮಂಡಳಿ ಕಾರು ತೊಳೆಯಬೇಡಿ, ಸ್ನಾನ ಮಾಡಬೇಡಿ ಎಂದು ತಿಳಿ ಹೇಳುತ್ತಿದೆ. ಆದರೆ ನೀರನ್ನು ಹೇಗೆ ಕೊಡುತ್ತೇವೆ ಎಂದು ಹೇಳುತ್ತಿಲ್ಲ ಎಂದು ಕಿಡಿಕಾರಿದರು.

ಪಾಪರ್‌ ಆಗಿರುವ ಸರ್ಕಾರದಲ್ಲಿ ಕುಡಿಯುವ ನೀರು ನೀಡಲು ಕೂಡ ಹಣವಿಲ್ಲ. ಜನರು ಈ ಬಾರಿ ತಪ್ಪದೇ ಮತದಾನ ಕೇಂದ್ರಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಇತ್ತೀಚೆಗೆ ನಡೆದ ಸೆಮಿಫೈನಲ್‌ನಲ್ಲಿ ಕಾಂಗ್ರೆಸ್‌ ಸೋತು ಸುಣ್ಣವಾಗಿದೆ, ಬಿಜೆಪಿ ಮೂರು ರಾಜ್ಯಗಳನ್ನು ಗೆದ್ದಿದೆ. ಬಿಜೆಪಿ ಈಗಾಗಲೇ ಅಂತಿಮ ಹಂತಕ್ಕೆ ಬಂದಾಗಿದ್ದರೂ, ಐಎನ್ ಡಿ ಎ ಒಕ್ಕೂಟದಲ್ಲಿ ಎಲ್ಲರೂ ಬಿಟ್ಟು ಹೋಗಿ ನಾಯಕರಿಲ್ಲದೆ ದಿಕ್ಕಿಲ್ಲದಂತಾಗಿದೆ. ಎಲ್ಲವೂ ಫಿಕ್ಸ್‌ ಆಗಿದ್ದರೂ ಅವರಿಗೆ ನಾಯಕತ್ವವೇ ಇಲ್ಲ, ಫಿಕ್ಸ್‌ ಆಗುವ ಮುನ್ನವೇ ಮ್ಯಾಚ್‌ ಮುಗಿದು ಒಕ್ಕೂಟ ಸೋಲಲಿದೆ ಎಂದು ಭವಿಷ್ಯ ನುಡಿದರು

ಹತ್ತು ತಿಂಗಳಲ್ಲಿ ಸಮಾಜದ್ರೋಹಿ ಕೆಲಸಗಳನ್ನು ಕಾಂಗ್ರೆಸ್‌ ಸರ್ಕಾರ ಮಾಡಿದೆ. ಬಿಜೆಪಿ ಸರ್ಕಾರವಿದ್ದಾಗ ಪ್ರವಾಹದ ಕುರಿತು ದೂರುಗಳು ಬರುತ್ತಿತ್ತು. ಈ ಸರ್ಕಾರದ ಅವಧಿಯಲ್ಲಿ ಬರಗಾಲ ಬಂದಿದೆ. ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ ಸಂಪುಟ ರಚನೆಯಾಗುವ ಮುನ್ನವೇ ಮಳೆ ಬಂದಿತ್ತು,ಸಿಎಂ ಸಿದ್ದರಾಮಯ್ಯ ಕಾಲಿಟ್ಟ ಕಡೆಯಲ್ಲೆಲ್ಲ ಬರ ಉಂಟಾಗಿದೆ, ಏನಿಲ್ಲ ಏನಿಲ್ಲ,ನೀರಿಲ್ಲ ಎಂಬ ಸ್ಥಿತಿ ಉಂಟಾಗಿದೆ ಎಂದು ವ್ಯಂಗ್ಯವಾಡಿದರು.

136 ಶಾಸಕರು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ತೆರಿಗೆಗಾಗಿ ಪ್ರತಿಭಟಿಸಿದ್ದರು. ಈಗ ಕರ್ನಾಟಕದ ನೀರು ತಮಿಳುನಾಡು ಹಕ್ಕು ಎಂದು ಹೇಳುತ್ತಿದ್ದಾರೆ. ಆನೆಯಿಂದ ವಯನಾಡಿನ ವ್ಯಕ್ತಿ ಮೃತಪಟ್ಟಾಗ ಇದು ರಾಜ್ಯದ ಆನೆ ಎಂಬ ಹಣೆಪಟ್ಟಿ ಕೊಟ್ಟು 15 ಲಕ್ಷ ರೂ. ಪರಿಹಾರ ನೀಡಿದ್ದರು. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಅಶೋಕ್ ಆಗ್ರಹಿಸಿದರು.


Share this with Friends

Related Post