ಬೆಂಗಳೂರು,ಜು.16: ಆಗಸ್ಟ್ 1 ರಿಂದ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ರಾಜ್ಯ ಸರ್ಕಾರ ಗ್ರೀನ ಸಿಗ್ನಲ್ ನೀಡಿದ್ದು, ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಜುಲೈ 1ರಿಂದ ಅನ್ವಯವಾಗುವಂತೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಆಗಸ್ಟ್ 1ರಿಂದ 7ನೇ ವೇತನ ಆಯೋಗ ಜಾರಿಗೆ ಬರಲಿದೆ. ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿಭತ್ಯೆ ಮತ್ತು ಶೇ.27.50ರಷ್ಟು ಫಿಟ್ ಮೆಂಟ್ ಸೇರಿಸಿ ವೇತನ, ಪಿಂಚಣಿ ಪರಿಷ್ಕರಿಸಲಾಗುವುದು ಎಂದು ಸಿದ್ದು ತಿಳಿಸಿದ್ದಾರೆ.
ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ.58.60ರಷ್ಟು ಹೆಚ್ಚಳವಾಗಲಿದೆ. ಕನಿಷ್ಠ ಮೂಲವೇತನ 17,000 ರಿಂದ 27,000ಕ್ಕೆ ಹೆಚ್ಚಳವಾಗಲಿದೆ. ಗರಿಷ್ಠ ವೇತನ 1,50,000ದಿಂದ 2,41,200ಕ್ಕೆ ಪರಿಷ್ಕರಣೆಯಾಗಲಿದೆ.
ನೌಕರರ ಕನಿಷ್ಠ ಪಿಂಚಣಿ 8,500ರೂ ನಿಂದ 13,500 ರೂಗೆ ಹಾಗೂ ಗರಿಷ್ಠ ಪಿಂಚಣಿ 75,000 ರೂನಿಂದ 1,20,600 ರೂಗೆ ಪರಿಷ್ಕರಣೆಯಾಗಲಿದೆ.
ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳಿಗೂ ಈ ಪರಿಷ್ಕರಣೆ ಅನ್ವಯವಾಗಲಿದೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ ವಾರ್ಷಿಕ 20,208 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ.