Thu. Mar 5th, 2026

ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಯಶಸ್ಸಿಗೊಳಿ: ಲಕ್ಷ್ಮೀ ಹೆಬ್ಬಾಳ್ಕರ್

Share this with Friends

ಕೋಲಾರ: ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಯಶಸ್ಸಿಗೊಳಿಸಬೇಕು, ಇದು ನನ್ನ ಕನಸಿನ ಯೋಜನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಂಗಳೂರಿನಲ್ಲಿ ನವೆಂಬರ್ 28 ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಕೋಲಾರದ ಜಿಲ್ಲಾಡಳಿತ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ನವೆಂಬರ್ 28ರ  ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಮುಂದಿನ 50 ವರ್ಷಕ್ಕೆ ಭದ್ರ ಬುನಾದಿ ಹಾಕುವುದೇ ಈ ಕಾರ್ಯಕ್ರಮದ ಉದ್ದೇಶ. ಮಹಿಳೆಯರ ಸಬಲೀಕರಣಕ್ಕೆ ಜಾರಿಗೆ ತಂದ ಯೋಜನೆಯೇ ಗೃಹಲಕ್ಷ್ಮಿ ಯೋಜನೆ. ಇದರ ಯಶಸ್ಸಿನ ಪ್ರಮುಖ ರೂವಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಇದೇ ಮಾದರಿಯಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಯಶಸ್ಸಿಗೊಳಿಸಬೇಕು ಎಂದು ಕರೆ ನೀಡಿದರು.

ಮಹಿಳೆಯರಿಗೆ ಶಕ್ತಿ‌ ತುಂಬಲು ಹಾಗೂ ರಕ್ಷಣೆ ನೀಡುವ ಸಲುವಾಗಿ ಅಕ್ಕ ಪಡೆಯನ್ನು ಆರಂಭಿಸಲಾಗುತ್ತಿದ್ದು, ಇದರಿಂದ ಮಹಿಳೆಯರಿಗೆ ನೈತಿಕವಾಗಿ ಸ್ಥೈರ್ಯ ಬರಲಿದೆ. ಜನನಿಬಿಡ ಪ್ರದೇಶದಲ್ಲಿ ಅಕ್ಕಪಡೆ ಓಡಾಡಲಿದ್ದು, ಮನೆಯ ಒಳಗೆ ಹಾಗೂ ಹೊರಗೆ ಹೆಣ್ಣುಮಕ್ಕಳು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸಿದರೂ ಸಹಾಯವಾಣಿ ಮೂಲಕ ಅಕ್ಕಪಡೆ ಗಮನಕ್ಕೆ ತರಬೇಕು ಎಂದರು.

ಇನ್ನು, ಬಡ ಮಕ್ಕಳಿಗೆ ತಳಹಂತದಲ್ಲಿ ಗುಣಮಟ್ಟದ ಶಿಕ್ಷಣ ಸಿಗುವ ದೃಷ್ಟಿಯಿಂದ ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆಜಿ, ಯುಕೆಜಿ‌ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಪೌಷ್ಠಿಕ ಆಹಾರದ ಜೊತೆಗೆ ಉತ್ತಮ ಶಿಕ್ಷಣ ಬಡ ಮಕ್ಕಳಿಗೆ ಸಿಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಕೊಟ್ಟ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. 2023ರ‌ ಚುನಾವಣಾ ಪೂರ್ವ ನಾವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದು ಹೇಳಿದರು.

ಇಡೀ ದೇಶವೇ ಬಡತನದಿಂದ ತತ್ತರಿಸಿದ್ದ ವೇಳೆ ಬಡ ಮಕ್ಕಳಿಗೂ ಪೌಷ್ಠಿಕ ಆಹಾರ, ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು 1973ರ ಅಕ್ಟೋಬರ್ 2  ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಮ್ಮ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದರು. ಇದಾದ ಬಳಿಕ ನಮ್ಮ ಪಕ್ಷ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತೆ ಕಾಯ್ದೆ, ಮಹಿಳೆಯರಿಗೆ ಮೀಸಲಾತಿ,‌ ಸ್ಥಳೀಯ ಆಡಳಿತದಲ್ಲಿ ಶೇಕಡ 50%  ಮೀಸಲಾತಿಯನ್ನು ಜಾರಿಗೆ ತಂದಿತು ಎಂದರು.


Share this with Friends

Related Post