ಮೈಸೂರು:ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಪಕ್ಷದ ಬಗ್ಗೆ ನಿಯತ್ತು ಮತ್ತು ನಿಷ್ಠೆ ಇಲ್ಲ. ಅವರು ಜೆಡಿಎಸ್ ಜೊತೆ ಇಲ್ಲ, ಬೇರೆ ಮಹಾನ್ ನಾಯಕರ ಜೊತೆಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ದೇವೇಗೌಡ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿ.ಟಿ. ದೇವೇಗೌಡರು ನಮ್ಮ ಜೊತೆಯಲ್ಲಿ ಇಲ್ಲ. ಅವರ ಬಗ್ಗೆ ನೀವು (ಮಾಧ್ಯಮದವರು) ಕೇಳುವುದು ಬೇಡ.ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದು ಇಲ್ಲದವರನ್ನು ನಾವು ಜತೆಯಲ್ಲಿಟ್ಟುಕೊಳ್ಳಬೇಕಾ? ನನ್ನ ಮುಂದೆ ಇನ್ನು ಮುಂದೆ ಪದೇಪದೆ ಅವರ ಹೆಸರು ಪ್ರಸ್ತಾಪ ಮಾಡಬೇಡಿ. ಅವರು ಮುಖ್ಯಮಂತ್ರಿಗೆ ಸರ್ಟಿಫಿಕೇಟ್ ಕೊಡುತ್ತಾರೆ! ಒಂದು ದಿನವೂ ಸರ್ಟಿಫಿಕೇಟ್ ಕೊಡಲಿಲ್ಲ. ಅಂಥವರನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಕಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸಿಎಂಗೆ ದೇವೇಗೌಡರು ಕುಮಾರಸ್ವಾಮಿನೇ ಟಾರ್ಗೆಟ್:
ಮುಖ್ಯಮಂತ್ರಿಗಳು ನಿರಂತರವಾಗಿ ಜೆಡಿಎಸ್ ಪಕ್ಷವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಯಾವ ರೀತಿ ದುರುಪಯೋಗ ಮಾಡಿಕೊಂಡರು ಎಂಬುದು ಗೊತ್ತಿದೆ. ಸಿನಿಮಾ ರಂಗದಲ್ಲಿ ದುಡಿದ ದುಡ್ಡಲ್ಲಿ 43 ಎಕರೆ ಖರೀದಿ ಮಾಡಿದ್ದೆ. ನನ್ನ 4 ಎಕರೆ ವಶಪಡಿಸಿಕೊಳ್ಳಲಿಕ್ಕೆ ಎಸ್ ಐಟಿ ಬೇರೆ ರಚನೆ ಮಾಡಿದ್ದಾರೆ! ಎಷ್ಟೊಂದು ಕಿರುಕುಳ ನೀಡುತ್ತಿದ್ದಾರೆ ಎಂಬುದು ನನಗಷ್ಟೇ ಗೊತ್ತು. ಇನ್ನು ಎರಡು ಕೇಸ್ʼಗಳನ್ನು ಕೋರ್ಟ್ʼನಲ್ಲಿ ಎದುರಿಸುತ್ತಿದ್ದೇನೆ ಎಂದರು.
ದೇವೇಗೌಡರ ಜೊತೆ ಬೆಳೆದುಬಂದ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಗಿಸುತ್ತೇವೆ ಎಂದರೆ ಅದು ಅವರ ಭ್ರಮೆ ಅಷ್ಟೇ. ಲಕ್ಷಾಂತರ ಕಾರ್ಯಕರ್ತರು ಜೆಡಿಎಸ್ ಪಕ್ಷ ಕಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿಯಿಂದ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮಂತ್ರಿ ಸಾ.ರಾ. ಮಹೇಶ್, ಸಂಸದ ಯದುವೀರ್ ಒಡೆಯರ್, ಶಾಸಕರಾದ ಜಿ.ಡಿ. ಹರೀಶ್ ಗೌಡ, ಶ್ರೀವತ್ಸ, ಮಾಜಿ ಶಾಸಕ ಅಶ್ವಿನ್ ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

