ಬೆಂಗಳೂರು,ಜು.18: ರೈತನಿಗೆ ಅವಮಾನ ಮಾಡಿದ ಜಿ.ಟಿ ಮಾಲ್ ಅನ್ನು 7 ದಿನಗಳ ಕಾಲ ಮುಚ್ಚಿಸುತ್ತೇವೆ ಎಂದು ಸಚಿವ ಬೈರತಿ ಸುರೇಶ್ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವರು, ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತನಾಡಿದ್ದೇವೆ, ಕಾನೂನಿನಲ್ಲಿ ಅವಕಾಶ ಇದೆ ಹಾಗಾಗಿ 7 ದಿನಗಳ ಕಾಲ ಮಾಲ್ ಮುಚ್ಚಿಸಿ, ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ ಗರಂ ಆಗಿದ್ದರು. ಅದು ಯಾರು ಎಷ್ಟೇ ದೊಡ್ಡವನು ಇರಲಿ ಅವರಿಗೆ ಏನು ಅನ್ನೋದನ್ನ ತೋರಿಸಬೇಕು,ರೈತರಿಗೆ ಅವಮಾನ ಮಾಡಿದ್ದನ್ನು ಖಂಡಿಸಬೇಕು, ಸರ್ಕಾರ ಕಠಿಣ ಕ್ರಮ ಜರುಗಿಸಬೇಕು,ಎಲ್ಲಾ ಮಾಲ್‌ಗಳಿಗೂ ಒಂದೇ ರೂಲ್ಸ್ ಮಾಡಬೇಕು ಎಂದು ಸೂಚಿಸಿದರು.
ಇದೇ ವೇಳೆ ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ,ಆ ಮಾಲ್‌ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ ಎಂದು ಶಾಸಕ ಲಕ್ಷ್ಮಣ ಸವದಿ ಆಗ್ರಹಿಸಿದರೆ,
ರೈತನಿಗೆ ಅವಮಾನ ಮಾಡಿದ ಆ ಮಾಲ್ ಅನ್ನು ಮುಚ್ಚಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಒತ್ತಾಯಿಸಿದರು.
ಅಲ್ಲದೆ ರಾಜ್ಯದ ಎಲ್ಲಾ ಕ್ಲಬ್‌ಗಳು, ಮಾಲ್‌ಗಳಲ್ಲಿ ಒಂದೇ ರೂಲ್ಸ್ ತರಬೇಕು. ಪಂಚೆ ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದನ್ನು ಬಿಡಬೇಕು ಎಂದು ಅಶೋಕ್ ಪಟ್ಟಣ, ಬೈರತಿ ಸುರೇಶ್ ತಿಳಿಸಿದರು.
ಶಾಸಕರ ಮಾತುಗಳನ್ನು ಆಲಿಸಿದ ನಂತರ ಸಚಿವ ಬೈರತಿ ಸುರೇಶ್ ಜಿ.ಟಿ ಮಾಲ್ ಅನ್ನು 7 ದಿನಗಳ ಕಾಲ ಮುಚ್ಚಿಸುತ್ತೇವೆ ಎಂದು
ಘೋಷಿಸಿದರು.