Fri. Mar 6th, 2026

ಕೇಂದ್ರದ ಅನುದಾನಕ್ಕೆ ‘ಗ್ಯಾರಂಟಿ’ ಕನ್ನ: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಗಂಭೀರ ಆರೋಪ

Share this with Friends

ಬೆಂಗಳೂರು: ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿ ರಾಜ್ಯಕ್ಕೆ ಬಿಡುಗಡೆ ಮಾಡುತ್ತಿರುವ ಕೋಟ್ಯಂತರ ರೂಪಾಯಿ ಅನುದಾನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗಂಭೀರವಾಗಿ ಆರೋಪಿಸಿದ್ದಾರೆ‌.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಈ ಕುರಿತು ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುವ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ನನಗಿರುವ ಮಾಹಿತಿ ಪ್ರಕಾರ ರಾಜ್ಯ ಸರಕಾರ ಮತ್ತು ಸಂಬಂಧಿತ ಇಲಾಖೆಯು ಆ ಹಣವನ್ನು ಸದ್ಬಳಕೆ ಮಾಡದೇ ಹಣಕಾಸು ಇಲಾಖೆ ಒತ್ತಾಯದ ಮೇರೆಗೆ ಹಣಬಳಕೆ ಸಂಬಂಧ ನಕಲಿ (ಫ್ಯಾಬ್ರಿಕೇಟೆಡ್) ದೃಢಪತ್ರವನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ದೂರಿದರು.

ಕೇಂದ್ರದ 1323.96 ಕೋಟಿ ವಿಶೇಷ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ. ಈ ಹಣಕ್ಕೆ ನಕಲಿ ಬಳಕೆ ಪ್ರಮಾಣಪತ್ರ ಕೊಟ್ಟಿದ್ದಾರಾ ಇಲ್ಲವೇ ಎಂಬ ಕುರಿತು ಮುಖ್ಯಮಂತ್ರಿಗಳು ಉತ್ತರಿಸಲಿ ಎಂದು ಆಗ್ರಹವನ್ನು ಮುಂದಿಟ್ಟರು. ಈ ಹಣ ಎಲ್ಲಿ ವರ್ಗಾವಣೆ ಆಗಿದೆ? ಎಂದು ಅವರು ಕೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ (SCSP/TSP) ಸುಮಾರು ₹14,730 ಕೋಟಿ ಮೊತ್ತದ ಹಣವನ್ನು ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಕ್ರಮವಾಗಿ ವರ್ಗಾಯಿಸಿದೆ. ಈ ಮೂಲಕ ತುಳಿತಕ್ಕೊಳಗಾದ ಸಮುದಾಯಗಳ ಹಿತಾಸಕ್ತಿಯನ್ನು ಸರ್ಕಾರ ಬಲಿಗೊಟ್ಟಿದೆ ಎಂದು ಅವರು ದೂರಿದರು.

ಕೇಂದ್ರದ ಹಣ ಪ್ರಚಾರಕ್ಕೆ ಲೂಟಿ:

ಕೇಂದ್ರದ 15ನೇ ಹಣಕಾಸು ಆಯೋಗದಡಿ ಹಳ್ಳಿಗಳ ಅಭಿವೃದ್ಧಿಗೆ ಬಂದ ಅನುದಾನವನ್ನು ಬಳಸಿಕೊಂಡು, ಕೇಂದ್ರದ ವಿರುದ್ಧವೇ ಸುಳ್ಳು ಜಾಹೀರಾತು ನೀಡಲು ರಾಜ್ಯ ಸರ್ಕಾರ ಬಳಸುತ್ತಿದೆ. ರಾಜ್ಯದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿಯಂತಹ ತುರ್ತು ಕೆಲಸಗಳಿಗೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಶ್ವೇತಪತ್ರಕ್ಕೆ ಆಗ್ರಹ:

“ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸಿನ ಸ್ಥಿತಿಗತಿಯ ಕುರಿತು ‘ಶ್ವೇತಪತ್ರ’ ಹೊರಡಿಸಬೇಕು” ಎಂದು ವಿಜಯೇಂದ್ರ ಆಗ್ರಹಿಸಿದರು. ಕೇಂದ್ರದ ಯೋಜನೆಗಳಿಗೆ ಹೆಸರು ಬದಲಿಸಿ ರಾಜಕೀಯ ಲಾಭ ಪಡೆಯುತ್ತಿರುವ ಸರ್ಕಾರದ ನಡೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಗೃಹಲಕ್ಷ್ಮಿ ಯೋಜನೆ 5 ಸಾವಿರ ಕೋಟಿ ಬಗ್ಗೆ ಉಡಾಫೆ ಉತ್ತರ:

ನಮ್ಮ ಶಾಸಕರು 5 ಸಾವಿರ ಕೋಟಿ ಗೃಹಲಕ್ಷ್ಮಿ ಯೋಜನೆ ಎಲ್ಲಿ ವರ್ಗಾವಣೆ ಆಗಿದೆ? ಎಂದು ಬೆಳಗಾವಿಯ ಅಧಿವೇಶನದಲ್ಲಿ ಪ್ರಶ್ನಿಸಿದ್ದರು. ಉಪಯೋಗ ಆಗಿದೆಯೇ? ದುರುಪಯೋಗ ಆಗಿದೆಯೇ? ಭ್ರಷ್ಟಾಚಾರ ಆಗಿದೆಯೇ? ಎಂಬ ಕುರಿತು ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳು ಇಂದಿನವರೆಗೆ ಉತ್ತರಿಸಿಲ್ಲ. ಮೊನ್ನೆ ಸದನದಲ್ಲೂ ವಿಪಕ್ಷ ನಾಯಕ ಆರ್.ಅಶೋಕ್ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉಡಾಫೆ ಉತ್ತರ ಕೊಟ್ಟಿದ್ದಾರೆ. ಈಗಲಾದರೂ ಮುಖ್ಯಮಂತ್ರಿಗಳು 5 ಸಾವಿರ ಕೋಟಿ ಬಾಕಿ ಬಗ್ಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.


Share this with Friends

Related Post