Fri. Mar 6th, 2026

ಗ್ಯಾರಂಟಿ ಯೋಜನೆಯನ್ನು ‘ಶ್ರೀಮಂತರು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲಿ’: ಡಿಸಿಎಂ ಡಿ.ಕೆ.ಶಿವಕುಮಾರ್

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಮಹತ್ವದ ಹೇಳಿಕೆ ನೀಡಿದ್ದಾರೆ. “ಆರ್ಥಿಕವಾಗಿ ಸಬಲರಾಗಿರುವವರು ಹಾಗೂ ಐಟಿ ಕಂಪನಿಗಳ ಉದ್ಯೋಗಿಗಳು ತಮಗೆ ಗ್ಯಾರಂಟಿ ಸೌಲಭ್ಯ ಬೇಡ ಎಂದು ತಿಳಿಸುತ್ತಿದ್ದಾರೆ. ಶ್ರೀಮಂತರು ಈ ಸೌಲಭ್ಯಗಳನ್ನು ಬಿಟ್ಟುಕೊಡುವುದರಲ್ಲಿ ತಪ್ಪೇನಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ನಾಗರಿಕರು ಹಾಗೂ ಸರ್ಕಾರಿ ನೌಕರರು 200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಇತರ ಸೌಲಭ್ಯಗಳು ತಮಗೆ ಬೇಡವೆಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಬಗ್ಗೆ ಗಂಭೀರವಾಗಿ ವಿಮರ್ಶೆ ನಡೆಸುತ್ತಿದೆ ಎಂದರು.

ಯಾವುದೇ ಯೋಜನೆ ಸ್ಥಗಿತವಿಲ್ಲ:

ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಡಿ.ಕೆ.ಶಿ, “ಎಷ್ಟೇ ಕಷ್ಟ ಬಂದರೂ ಗ್ಯಾರಂಟಿಗಳನ್ನು ಮುಂದುವರಿಸುತ್ತೇವೆ. ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂಬುದು ಕೇವಲ ಸುಳ್ಳು ಸುದ್ದಿ. ಮುಂಬರುವ ಬಜೆಟ್‌ನಲ್ಲಿ ಜನಪರ ಹಾಗೂ ಅತ್ಯುತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕೇಂದ್ರದಿಂದ ಸೂಕ್ತ ಸಹಕಾರ ಸಿಗದಿದ್ದರೂ ನಮ್ಮ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸುತ್ತಿದೆ. ಮೃತಪಟ್ಟ ಮಹಿಳೆಯರ ಖಾತೆಗೆ ಜಮೆಯಾಗಿರುವ ಹಣದ ಬಗ್ಗೆಯೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ,” ಎಂದು ಮಾಹಿತಿ ನೀಡಿದರು.

 


Share this with Friends

Related Post