ಹುಬ್ಬಳ್ಳಿ: ಯಾವ ಪೊಲೀಸರು ಕಳ್ಳತನ ಮಾಡಲು ಇಳಿದು, 7 ಕೋಟಿ ಬ್ಯಾಂಕ್ ದರೋಡೆ ಮಾಡಿದ್ದರೋ ಅದೇ ಪೊಲೀಸರು ದುಶ್ಶಾಸನನ ರೀತಿಯಲ್ಲಿ ಹಲ್ಲೆ ಮಾಡಿ ಮಹಿಳೆಯ ವಿವಸ್ತ್ರಗೊಳಿಸಿದ ಘಟನೆ ನಡೆದಿದ್ದು,ಇಡೀ ಪ್ರಕರಣದ ಸತ್ಯಾಂಶ ತಿಳಿಯಲು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಸಂಬಂಧ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಇಂದು ಸಂತ್ರಸ್ತ ಮಹಿಳೆಯ ಮನೆಗೆ ಭೇಟಿ ನೀಡಿದರು.ಅವರಿಂದ ವಿವರ ಪಡೆದುಕೊಂಡು ಧೈರ್ಯ ತುಂಬುವ ಪ್ರಯತ್ನ ನಡೆಸಿದರು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್,ಮಹಿಳಾ ಪರ ವಾದ ಮಾಡಬೇಕಾದ ರಾಜ್ಯ ಮಹಿಳಾ ಆಯೋಗದವರು ಏನೂ ಆಗಿಲ್ಲವೆಂದು ಬೆಂಗಳೂರಿನಲ್ಲೇ ಹೇಳಿಕೆ ಕೊಟ್ಟಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಕೊಟ್ಟಿದೆ. ತನಿಖೆ ಮಾಡದೇ ನೀವು ಕ್ಲೀನ್ ಚಿಟ್ ಕೊಟ್ಟಿದ್ದು ಹೇಗೆ ಎಂದು ಸರಕಾರ, ಪೊಲೀಸ್ ಇಲಾಖೆಯು ಉತ್ತರಿಸಲಿ ಎಂದು ಆಗ್ರಹಿಸಿದರು.
ಆ ಹೆಣ್ಮಗಳೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎನ್ನುತ್ತಾರೆ. ಹಾಗಿದ್ದರೆ ಪೊಲೀಸರು ಕತ್ತೆ ಕಾಯುತ್ತಿದ್ದರೇ? 40 ಜನ ಪೊಲೀಸರು, ವ್ಯಾನ್ ನಿಮ್ಮದೇ, ಚಾಲಕನೂ ನಿಮ್ಮವನೇ, ಪೊಲೀಸ್- ಕಾನೂನು ನಿಮ್ಮದೇ ಇರುವಾಗ ನಿಮ್ಮಿಂದ ತಡೆಯಲಾಗಲಿಲ್ಲವೇ? ಇದು ಶುದ್ಧ ಸುಳ್ಳು. ಒಬ್ಬರನ್ನು ಕರೆದೊಯ್ಯಲು 40 ಜನರು ಬೇಕಾಗಿದ್ದರೇ? ಯಾರ ಒತ್ತಡದ ಮೇಲೆ ಇದನ್ನು ಮಾಡಿದ್ದೀರಿ? ಯಾರ ಸೂಚನೆ ಇತ್ತು? ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಅದುವರೆಗೂ ಪೊಲೀಸ್ ಇನ್‍ಸ್ಪೆಕ್ಟರನ್ನು ಅಮಾನತುಗೊಳಿಸಿ; ವ್ಯಾನ್ ಒಳಗಿದ್ದವರನ್ನೂ ಅಮಾನತು ಮಾಡಿ ಎಂದು ಒತ್ತಾಯಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸುಜಾತ ಹಂಡಿ ಅವರನ್ನು ಬಂಧಿಸಲು ಕೌನ್ಸಿಲರ್ ದೂರು ಕೊಟ್ಟಿದ್ದರು. ಇನ್‍ಸ್ಪೆಕ್ಟರ್ ಅವರು ಬಂಧನ ಸಂಬಂಧ ಸುಮಾರು ಜನರನ್ನು ಕರೆದೊಯ್ದಾಗ ಆದ ಘಟನೆ ಎಂಥದ್ದೆಂದು ಪೊಲೀಸರು ತನಿಖೆ ಮಾಡಿ ಹೇಳಲಿ.ಇಡೀ ದೇಶದಲ್ಲಿ ಇದೊಂದು ತಲೆತಗ್ಗಿಸುವ ಘಟನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನೋಟಿಸ್ ಕೊಟ್ಟಿದೆ. ಇದರ ಕುರಿತು ಪರಿಶೀಲಿಸುವುದು ನಮ್ಮ ಧರ್ಮ ಎಂದರು.
ಒಂದು ವಿಡಿಯೋ ಇವತ್ತು ಹರಿದಾಡುತ್ತಿದ್ದು ಇದನ್ನು 3-4 ವರ್ಷಗಳ ಹಿಂದೆ ಕೌನ್ಸಿಲರ್ ಮತ್ತು ಹಂಡಿಯವರು ಒಟ್ಟಿಗೆ ಇದ್ದಾಗ ನಡೆದ ಘಟನೆ ಎಂಬುದು ಈಗ ಹೊರಕ್ಕೆ ಬರುತ್ತಿದೆ. ಈ ವಿಡಿಯೋ ಕಾಂಗ್ರೆಸ್ಸಿನ ನೀತಿಯನ್ನು ಸ್ಪಷ್ಟವಾಗಿ ಹೊರಹಾಕಿದೆ. ಇನ್ನು ಮುಂದೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಜೊತೆ ಬಹಳ ಹುಶಾರಾಗಿರಬೇಕು. ನಿಮ್ಮಿಂದ ತಪ್ಪು ಮಾಡಿಸಿ ನಿಮ್ಮ ವಿಡಿಯೋ ಇಟ್ಟುಕೊಂಡಿರುತ್ತಾರೆ. ಪಾರ್ಟಿ ಬಿಟ್ಟರೆ ಅಥವಾ ವಿರೋಧ ಮಾಡಿದಾಗ ಹೊರಕ್ಕೆ ಬಿಡುತ್ತಾರೆ ಎಂಬುದು ಸ್ಪಷ್ಟಗೊಂಡಿದೆ. ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಎಚ್ಚರದಿಂದಿರಿ ಎಂದು ಕಿವಿಮಾತು ಹೇಳಿದರು.

