ಕೆರಗೊಂಡು. ಫೆ.08 : ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಮತ್ತು ಕೆರಗೋಡು ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಮಂಡ್ಯ ನಗರದ ಕೆಲವೆಡೆ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಿದ್ದಾರೆ. ಕೆರೆಗೋಡಿನ ಹನುಮ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿರುವ ಸಂಘಟನೆಗಳ ಮುಖಂಡರು ಸರ್ಕಾರ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಬಂದ್ ಗೆ ವ್ಯಾಪಾರಸ್ಥರು, ಹೊಟೇಲ್ ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೆರಗೋಡು ನಗರದಲ್ಲಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಕೆರಗೋಡಿನಲ್ಲಿ ಬಿಗಿ ಪೊಲೀಸ್ (Police) ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಕ್ಕೆ ಎಎಸ್ಪಿ ತಿಮ್ಮಯ್ಯ ಭೇಟಿ ನೀಡಿ ಭದ್ರತೆ ಪರಿಶೀಲಿಸಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಇಡೀ ಮಂಡ್ಯ ನಗರದಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದ್ದು, ಕೆರೆಗೋಡು ಗ್ರಾಮದ ಹೊರಭಾಗದ ನಾಖಾಬಂಧಿ ಮಾಡಿ ಒಬ್ಬೊಬ್ಬರನ್ನೇ ಪರಿಶೀಲಿಸಿ ಮಂಡ್ಯ ನಗರದ ಕಡೆ ಬಿಡುತ್ತಿದ್ದುದು ಕಂಡುಬಂದಿತು. ಯಾವುದೇ ಕಾರಣಕ್ಕೂ ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಸ್ಥಳೀಯ ಶಾಸಕರು ಹಾಗೂ ಕೆಲವರು ಬೇಕೆಂತಲೇ ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿಂದೂ ವಿರೋಧಿ ಧೋರಣೆ ತಳೆದಿದ್ದಾರೆ ಎಂದು ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಧ್ವಜ ಸ್ತಂಭದ ಹತ್ತಿರ ಕೂಡ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹನುಮಧ್ವಜ ತೆರವು ಮಾಡುವಲ್ಲಿ ಶಾಸಕರ ಪಾತ್ರ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಮನೆಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಪ್ರತಿಭಟನಾಕಾರರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶ ಒಡೆಯುವ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು : ಈಶ್ವರಪ್ಪ ವಿವಾದಾತ್ಮಕ ಹೇಳಿಕೆ